ಅಲ್ಪಾವಧಿ ಬೆಳೆಸಾಲ ಪ್ರಮಾಣ ನಿಗದಿ ವೇಳೆ ರೈತರ ಹಿತದೃಷ್ಟಿಗೆ ಧಕ್ಕೆ ಬೇಡ: ಪರಿಷತ್ ಉಪಸಭಾಪತಿ ಧರ್ಮೇಗೌಡ

Update: 2019-01-05 17:27 GMT

ಚಿಕ್ಕಮಗಳೂರು, ಜ.5: ರೈತರ ಮತ್ತು ಬೆಳೆಗಾರರ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಡುವುದು ಬ್ಯಾಂಕಿಂಗ್ ಕ್ಷೇತ್ರದ ಕರ್ತವ್ಯವಾಗಬೇಕು. ಅದರಲ್ಲೂ ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಬ್ಯಾಂಕುಗಳು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕೆಂದು ವಿಧಾನಪರಿಷತ್ ಉಪಸಭಾಪತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿಂದು ಕರೆಯಲಾಗಿದ್ದ 2019-20ನೇ ಸಾಲಿಗೆ ಜಿಲ್ಲೆಯಲ್ಲಿನ ವಿವಿಧ ಬೆಳೆಗಳಿಗೆ ನೀಡಬಹುದಾದ ಬೆಳೆ ಸಾಲಗಳ ಪ್ರಮಾಣವನ್ನು ನಿಗದಿ ಪಡಿಸುವ ಕುರಿತಾದ ರೈತರು, ಸಹಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ನಿರ್ದೇಶಕರು, ನಬಾರ್ಡ್, ಕೃಷಿ, ತೋಟಗಾರಿಕೆ ಹಾಗೂ ಕಾಫಿ ಬೋರ್ಡ್ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭತ್ತ ಸೇರಿದಂತ ಹಲವು ಬೆಳೆಗಳು ಅಯ್ಯನಕೆರೆ ಸೇರಿದಂತೆ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಹಿಂದೆ ಹೇರಳವಾಗಿ ಬೆಳೆಯುತ್ತಿದ್ದರು. ಆದರೆ, ಈಗ ರೈತರು ಭತ್ತ ಹಾಗೂ ಇತರೆ ಧಾನ್ಯಗಳನ್ನು ಬೆಳೆಯುವುದನ್ನೇ ಕೈಬಿಟ್ಟಿರುವುದು ಆಘಾತಕಾರಿ ಬೆಳವಣಿಗೆ ಎಂದ ಅವರು, ಇದನ್ನೆಲ್ಲಾ ಮನಗಂಡು ಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳದಿದ್ದಲ್ಲಿ ದೇಶಕ್ಕೆ ಭವಿಷ್ಯವಿರುವುದಿಲ್ಲ. ಕೃಷಿಕರ ನೆರವಿಗೆ ಇತಿಮಿತಿಯೊಳಗೆ ಎಲ್ಲಾ ರೀತಿಯ ನೆರವಿಗೆ ಡಿಸಿಸಿ ಬ್ಯಾಂಕ್ ಸಿದ್ದ ಎಂದರು.

ಡಿಸಿಸಿ ಬ್ಯಾಂಕ್ ಕಳೆದ ಸಾಲಿನಲ್ಲಿ 3.75 ಕೋಟಿ ರೂ. ವರಮಾನ ತೆರಿಗೆ ಪಾವತಿಸಿದೆ. ಇದು ರೈತರ ಹಣ. ರೈತರ ದುಡಿಮೆಯ ಪಾಲನ್ನು ಯಾವ ಸರಕಾರಗಳು ಕಿತ್ತುಕೊಳ್ಳುತ್ತಿರಲಿಲ್ಲ. ಈ ಹೊಸ ನೀತಿಯ ವಿರುದ್ಧ ಸಹಕಾರಿಗಳ ಆಕ್ರೋಶವನ್ನು ವ್ಯಕ್ತಪಡಿಸಲು ಹಾಗೂ ಕೇಂದ್ರ ಸರಕಾರ ಗಮನ ಸೆಳೆಯುವ ನಿಟ್ಟಿನಲ್ಲಿ ಚಳುವಳಿ ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು. 

ವಿವಿಧ ಬೆಳೆಗಳಿಗೆ ಕೊಡಬಹುದಾದ ಅಲ್ಪಾವಧಿ ಬೆಳೆ ಸಾಲಗಳ ಪ್ರಮಾಣವನ್ನು ನಿಗದಿಪಡಿಸುವಾಗ ರೈತರ ಹಿತದೃಷ್ಟಿಯನ್ನೇ ಮುಂದಿಟ್ಟುಕೊಳ್ಳಬೇಕಾಗಿದೆ. ಬಯಲುಸೀಮೆ ಹಾಗೂ ಮಲೆನಾಡಿನ ಕೃಷಿಕರಿಗೆ ಸಾಧ್ಯವಾದಷ್ಟು ನೆರವಾಗುವ ರೀತಿಯಲ್ಲಿ ಸಾಲದ ಪ್ರಮಾಣವನ್ನು ನಿಗದಿಗೊಳಿಸಲಾಗುತ್ತಿದೆ ಎಂದ ಅವರು, ಇಡೀ ರಾಜ್ಯದಲ್ಲಿ ಜಾರಿಯಲ್ಲಿರುವ ಸಾಲ ಮರುಪಾವತಿ ನೀತಿ ನಿಯಮಗಳಿಗೆ ಅನುಸಾರ ವಾಗಿ ಬೆಳೆಗಳಿಗೆ ಸಾಲವನ್ನು ನಿಗದಿಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ಸಹಕಾರಿಗಳು ಮತ್ತು ಇಲಾಖಾಧಿಕಾರಿಗಳ ಸಲಹೆ, ಸೂಚನೆಗಳ ಕುರಿತು ಚರ್ಚಿಸಿ ಮುಂಗಾರು ಬೆಳೆ ಸಾಲ ನೀಡಿಕೆ ಅವಧಿ ಏಪ್ರಿಲ್‍ನಿಂದ ಸೆಪ್ಟೆಂಬರ್, ಹಿಂಗಾರು ಬೆಳೆ ಸಾಲ ನೀಡಿಕೆ ಅವಧಿಯನ್ನು ಅಕ್ಟೋಬರ್ ನಿಂದ ಮಾರ್ಚ್ ಎಂದು ನಿಗದಿಗೊಳಿಸಲಾಗಿದೆ ಎಂದ ಅವರು, ಸದಸ್ಯರಿಂದ ಸಂಘಕ್ಕೆ ಬೆಳೆ ಸಾಲ ಮರಪಾವತಿ ಅವಧಿಯನ್ನು ಮುಂಗಾರು ಬೆಳೆಗೆ ಸಾಲ ವಿತರಿಸಿದ 365 ದಿನಗಳು ಮೀರದಂತೆ ಹಾಗೂ ಹಿಂಗಾರು ಬೆಳೆ ಸಾಲ ವಿತರಿಸಿದ 365 ದಿನಗಳು ಮೀರದಂತೆ ನಿಗದಿಗೊಳಿಸಲಾಗಿದೆ ಎಂದವರು ತಿಳಿಸಿದರು.

ವಿವಿಧ ಬೆಳೆಗಳಿಗೆ ನೀಡ ಬಹುದಾದ ಸಾಲದ ಮಿತಿಯನ್ನು ನಿರ್ಧರಿಸಲಾಗಿದ್ದು, ಪ್ರಮುಖ ವಾಗಿ ಸಾಮಾನ್ಯ ಬೆಳೆಗಳಾದ ನೀರಾವರಿ ಭತ್ತಕ್ಕೆ ಎಕರೆಗೆ ರೂ. 32000, ಮಳೆ ಆಶ್ರಿತ ಭತ್ತಕ್ಕೆ 30000, ರಾಗಿಗೆ 20000, ಹುರುಳಿಗೆ 10000, ಸಾಮೆ-12000, ತೋಟಗಾರಿಕಾ ಬೆಳೆಗಳಾದ ಮಾವಿಗೆ 15000, ಬಾಳೆಗೆ 36500, ಪಪ್ಪಾಯಿ-30000, ತರಕಾರಿ ಬೆಳೆಗಳಾದ ನೀರಾವರಿ ಆಲೂಗೆಡ್ಡೆಗೆ ರೂ. 34600, ಮಳೆ ಆಶ್ರಿತ ಆಲೂಗೆಡ್ಡೆಗೆ 28000, ಟೊಮೊಟೊ 40000, ಈರುಳ್ಳಿಗೆ 30000, ಶುಂಠಿಗೆ 35000, ವಾಣಿಜ್ಯ ಬೆಳೆಗಳಾದ ತೆಂಗು-40000, ಅಡಿಕೆ-65000 ಕಾಳುಮೆಣಸು-20000, ಕಾಫಿ ಅರೇಬಿಕಾ-56000, ಕಾಫಿ ರೋಬೆಸ್ಟಾ-38000 ರೂ. ಗಳ ವರೆಗೆ ಸಾಲ ನೀಡಬಹುದಾದ ಪ್ರಮಾಣ ಎಂದು ನಿಗದಿಪಡಿಸಲಾಗಿದೆ ಎಂದು ಧರ್ಮೇಗೌಡ ಇದೇ ವೇಳೆ ತಿಳಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಹೆಗಡೆ, ನಿರ್ದೇಶಕರಾದ ಮಂಜುನಾಥ್, ಕೆ.ಪಿ.ಕುಮಾರ್, ಬಿ.ಎಲ್.ಸಂದೀಪ್, ಕೃಷಿಕರಾದ ಬೀ.ನಿ.ವಿಶ್ಬನಾಥ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಜಿ.ಪೂರ್ಣಿಮ, ಕಾಫಿ ಬೋರ್ಡ್, ನಬಾರ್ಡ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಪ್ರಗತಿಪರ ಕೃಷಿಕರು ಹಾಗೂ ಸಹಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News