ಕೇಂದ್ರಕ್ಕೆ 40 ಸಾವಿರ ಕೋಟಿ ರೂ.ವರೆಗೆ ಮಧ್ಯಂತರ ಡಿವಿಡೆಂಡ್ ನೀಡಲಿದೆ ಆರ್ ಬಿಐ?

Update: 2019-01-07 11:37 GMT

ಹೊಸದಿಲ್ಲಿ, ಜ.7: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ ತಿಂಗಳೊಳಗಾಗಿ ಮಧ್ಯಂತರ ಡಿವಿಡೆಂಡ್ ಆಗಿ ಕೇಂದ್ರ ಸರಕಾರಕ್ಕೆ 30,000 ಕೋಟಿ ರೂ.ಗಳಿಂದ 40,000 ಕೋಟಿ ರೂ. ಹಸ್ತಾಂತರಿಸುವ ಸಾಧ್ಯತೆಯಿದೆಯೆಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಆರ್ ಬಿಐ ಮೀಸಲು ನಿಧಿಯನ್ನು ಸರಕಾರದ ಜತೆ ಹಂಚುವ ಕುರಿತಾಗಿ ಬ್ಯಾಂಕ್ ಹಾಗೂ ಕೇಂದ್ರ ಸರಕಾರದೊಂದಿಗಿನ ಇತ್ತೀಚಿಗಿನ ಸಂಘರ್ಷ ಸ್ಥಿತಿಯ ನಂತರ ಹಿಂದಿನ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿ ಶಕ್ತಿಕಂಠ ದಾಸ್ ನೂತನ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಇಂತಹ ಒಂದು ಬೆಳವಣಿಗೆಯ ಸಂಭಾವ್ಯತೆ ಕಂಡು ಬಂದಿದೆ.

ತೆರಿಗೆ ಸಂಗ್ರಹದಲ್ಲಿ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣಾ ವರ್ಷದಲ್ಲಿ ಏರುತ್ತಿರುವ ವಿತ್ತೀಯ ಕೊರತೆಯನ್ನು ನೀಗಿಸಲು ಈ ಡಿವಿಡೆಂಡ್ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಸಹಾಯ ಮಾಡಲಿದೆಯೆಂದು ಊಹಿಸಲಾಗಿದೆ.

ಆರ್ ಬಿಐ ಮೀಸಲು ನಿಧಿಯನ್ನು ಹಂಚುವ ಕುರಿತಂತೆ ಈಗಾಗಲೇ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಒಂದು ಸಮಿತಿಯನ್ನು ನೇಮಕ ಮಾಡಿವೆ. ರಿಸರ್ವ್ ಬ್ಯಾಂಕ್ ಕೇಂದ್ರಕ್ಕೆ ನೀಡುವ ಸಾಧ್ಯತೆಯಿರುವ ಈ ಬೃಹತ್ ಡಿವಿಡೆಂಡ್ ಮೊತ್ತದ ಬಗ್ಗೆ ಇಲ್ಲಿಯ ತನಕ ಆರ್‍ಬಿಐ ಯಾ ವಿತ್ತ ಸಚಿವಾಲಯ ಪ್ರತಿಕ್ರಿಯಿಸಿಲ್ಲ.

ಈ ಬಾರಿ ಸರಕಾರದ ವಿತ್ತೀಯ ಕೊರತೆ ರೂ 1 ಲಕ್ಷ ಕೋಟಿಯಷ್ಟು ಅಧಿಕವಾಗಿದೆಯೆಂದು ಹೇಳಲಾಗಿದ್ದು, ಸರಕಾರಕ್ಕೆ ನೀಡುವ ಡಿವಿಡೆಂಡ್ ಕುರಿತಂತೆ ಈ ವರ್ಷದ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವ ವೇಳೆಗೆ ರಿಸರ್ವ್ ಬ್ಯಾಂಕ್ ತನ್ನ ನಿರ್ಧಾರ ಕೈಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News