ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು: ಜಾಗೃತಿ ಮೂಡಿಸಲು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ

Update: 2019-01-07 12:33 GMT

ಮಡಿಕೇರಿ, ಜ.7: ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಕಾರ್ಯಕ್ರಮಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ಚೇತನ ಮತ್ತು ಧನಶ್ರೀ ಯೋಜನೆ, ಪುನರ್ ವಸತಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಂತಾಗಬೇಕು. ಇತರರಂತೆ ಬದುಕು ನಡೆಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  

ಲಿಂಗತ್ವ ಅಲ್ಪಸಂಖ್ಯಾತರಿಗೆ ಎಲ್ಲಿಯೂ ಸಹ ಶೋಷಣೆ ಉಂಟಾಗಬಾರದು. ಲಿಂಗತ್ವ ಅಲ್ಪಸಂಖ್ಯಾತರು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಚುನಾವಣಾ ಮತದಾರರ ಗುರುತಿನ ಚೀಟಿ ಹೊಂದಿರಬೇಕು. ಜೊತೆಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.   

ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಕಾರ್ಯಕ್ರಮ ಸಂಬಂಧ ಮಾಹಿತಿ ನೀಡಿದ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಮಮ್ತಾಜ್ ಅವರು ಚೇತನ ಯೋಜನೆಯಡಿ ಲೈಂಗಿಕ ವೃತ್ತಿ ನಿರತ ಮಹಿಳೆಯರಿಗೆ ತಾವು ಈಗಿರುವ ವೃತ್ತಿಯಿಂದ ಹೊರಬಂದು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 50 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. 

ಧನಶ್ರೀ ಯೋಜನೆಯಡಿ ಅರ್ಹರು ಸ್ವಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಹಾಗೂ ಅವಕಾಶದಿಂದ ವಂಚಿತರಾದವರಿಗೆ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು 50 ಸಾವಿರ ರೂ. ಸಹಾಯಧನ ದೊರೆಯಲಿದೆ. ಈ ಸಂಬಂಧ 5 ಗುರಿ ಇದ್ದು, 9 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ನೀಡಿದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ 50 ಸಾವಿರ ರೂ. ಸಹಾಯಧನವಿದ್ದು, ಜಿಲ್ಲೆಯಲ್ಲಿ 10 ಗುರಿ ನಿಗದಿ ಮಾಡಲಾಗಿದ್ದು, 8 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಮಾಹಿತಿ ನೀಡಿದರು. 

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹಾನಿಗೀಡಾದ ಅಂಗನವಾಡಿಗಳ ಸಂಬಂಧ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಇದುವರೆಗೆ ಎಷ್ಟು ಅಂಗನವಾಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಪ್ರಗತಿಯಲ್ಲಿರುವ ಕಾಮಗಾರಿ ಎಷ್ಟು, ಆರಂಭವಾಗಬೇಕಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಅತಿವೃಷ್ಟಿಗೆ ತುತ್ತಾಗಿ ಹಾನಿಯಾದ ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್ ಇಂಜಿನಿಯರ್ ಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.  

ಜಿಲ್ಲೆಯಲ್ಲಿ 870 ಅಂಗನವಾಡಿ ಕೇಂದ್ರಗಳಿದ್ದು, 720 ಸ್ವಂತ ಕಟ್ಟಡಗಳನ್ನು ಒಳಗೊಂಡಿವೆ. 30 ಅಂಗನವಾಡಿ ಕಟ್ಟಡಗಳು ಪೂರ್ಣ ಹಾನಿಯಾಗಿದ್ದು, 130 ಸಣ್ಣ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಿತಿಮತಿ ವ್ಯಾಪ್ತಿಯ ಅಂಗನವಾಡಿಗಳಲ್ಲಿ ಬೆಳಕು ಇಲ್ಲದೆ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡುತ್ತಾರೆ. ಕಾಡು ಪ್ರಾಣಿಗಳ ಹಾವಳಿ ಬೇರೆ ಇದೆ. ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಏಕೆ ಕಲ್ಪಿಸಿಲ್ಲ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸಿದರು. ಇಲಾಖೆಗಳ ಅಧಿಕಾರಿಗಳು ಮಾನವೀಯತೆ ಇಲ್ಲದೆ ಕೆಲಸ ಮಾಡುತ್ತಿರುವುದು ದುರಂತವೇ ಸರಿ ಎಂದು ಜಿಲ್ಲಾಧಿಕಾರಿ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. 

ಜಿ.ಪಂ. ಸಿಇಓ ಕೆ.ಲಕ್ಷ್ಮಿಪ್ರಿಯ ಅವರು ಮಾತೃಪೂರ್ಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗುಪ್ತಾಜಿ, ಕಾರ್ಮಿಕ ಅಧಿಕಾರಿ ರಾಮಕೃಷ್ಣ, ತಾ.ಪಂ.ಇಒಗಳಾದ ಲಕ್ಷ್ಮಿ, ಸಿಡಿಪಿಒಗಳಾದ ಅರುಂಧತಿ(ಮಡಿಕೇರಿ), ಶೀಲಾ(ಸೋಮವಾರಪೇಟೆ), ಸೀತಾಲಕ್ಷ್ಮಿ(ವಿರಾಜಪೇಟೆ), ಜಿಲ್ಲಾಸ್ಪತ್ರೆಯ ಡಾ.ಮಂಜುನಾಥ್ ಇತರರು ಹಲವು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News