ಸಮ್ಮಿಶ್ರ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ: ಶಾಸಕ ಸಿ.ಟಿ.ರವಿ ಆರೋಪ

Update: 2019-01-07 12:43 GMT

ಚಿಕ್ಕಮಗಳೂರು, ಜ.7: ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿಯವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಧರಣಿ ನಡೆಸಿದರು.

ಇತ್ತೀಚೆಗೆ ಸಚಿವ ಪುಟ್ಟರಂಗಶೆಟ್ಟಿಯವರ ಆಪ್ತ ಎನ್ನಲಾದ ವ್ಯಕ್ತಿಯೋರ್ವರ ಬಳಿ ವಿಧಾನಸೌಧ ಪೋಲೀಸರು 25.75 ಲಕ್ಷ ರೂ. ಪತ್ತೆಯಾದ ಹಿನ್ನೆಲೆಯಲ್ಲಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿ ಸಮ್ಮಿಶ್ರ ಸರಕಾರ ಭ್ರಷ್ಟಚಾರದಲ್ಲಿ ಮುಳುಗಿದ್ದು, ಭ್ರಷ್ಟ ಸಚಿವರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿದರು.

ಧರಣಿ ನೇತೃತ್ವ ವಹಿಸಿದ್ದ ಶಾಸಕ ಸಿ.ಟಿ.ರವಿ ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸೌಧ ಪ್ರವೇಶಕ್ಕೆ ಹಲವು ನಿರ್ಬಂಧಗಳನ್ನು ಹಾಕುವ ಮೂಲಕ ತಡೆ ಹಾಕಿದ್ದರು. ಆದರೆ ಈ ಹಣದ ಪತ್ತೆ ಪ್ರಕರಣದಿಂದ ದಂಧೆ ಎಲ್ಲಿ ನಡೆಯುತ್ತಿದೆ ಎಂದು ಸಾಭೀತಾಗಿದೆ ಎಂದರು.

ಪುಟ್ಟರಂಗಶೆಟ್ಟಿಯವರ ಆಪ್ತ ಸಹಾಯಕ ಲಕ್ಷಾಂತರ ರೂ. ನಗದೊಂದಿಗೆ ಸಿಕ್ಕಿ ಬಿದ್ದಿರುವುದರಿಂದ ಸಮ್ಮಿಶ್ರ ಸರಕಾರದಲ್ಲಿ ಶಕ್ತಿಸೌಧದ ದುರ್ಬಳಕೆಯಾಗುತ್ತಿದೆ. ಭಷ್ಟಾಚಾರದ ಕೇಂದ್ರವಾಗುತ್ತಿದೆ ಎಂದ ಅವರು, ಈ ಹಣ ಹೇಗೆ ಬಂತು ಎನ್ನುವುದಕ್ಕೆ ಮುಖ್ಯಮಂತ್ರಿ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸಚಿವ ಪುಟ್ಟರಂಗಶೆಟ್ಟಿ ಪ್ರಕರಣದಿಂದ ಸಮ್ಮಿಶ್ರ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ ಎಂಬುದು ಜಗಜ್ಜಾಹೀರಾಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಪ್ರಕರಣವನ್ನು ಸಮರ್ಥಿಸಿಕೊಂಡಿರುವುದು ನಾಚಿಕೆಗೇಡು ಎಂದು ಟೀಕಿಸಿದ ಅವರು, ಕೇಂದ್ರ ಸರಕಾರ ಪೆಟ್ರೋಲ್ ಕಡಿಮೆ ಮಾಡಲು ಕ್ರಮವಹಿಸಿದ್ದು, ರಾಜ್ಯದಲ್ಲಿ ಪೆಟ್ರೋಲ್‍ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರವೇ ಕಾರಣವಾಗಿದೆ. ಕಳೆದ 2 ತಿಂಗಳಿನಿಂದ ಇಳಿಮುಖವಾಗಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ರಾಜ್ಯ ಸರಕಾರ ಏಕಾಏಕಿ ಹೆಚ್ಚಿಸಿ ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಸರಕಾರದ ಈ ಮಾರಕ ತೀರ್ಮಾನಗಳಿಂದ ಇಂಧನ ಬೆಲೆ ಲೀಟರ್ ಗೆ 2 ರೂ. ಹೆಚ್ಚಿದೆ. ಅಲ್ಲದೇ ವಿದ್ಯುತ್‍ಗೆ ಪ್ರತೀ ಯೂನಿಟ್‍ಗೆ 28 ರೂಪಾಯಿಯಷ್ಟು ಹೆಚ್ಚಿಸಿರುವ ಸಮ್ಮಿಶ್ರ ಸರಕಾರ ಜನಸಾಮಾನ್ಯರ ವಿರೋಧಿಯಾಗಿದೆ ಎಂದು ಆರೋಪಿಸಿದರು. 

ಇಂಧನ ದರ ಹೆಚ್ಚಳಕ್ಕೆ ಕೇಂದ್ರ ಸರಕಾರವನ್ನು ದೂಷಿಸಿ ಭಾರತ್ ಬಂದ್ ಕರೆ ನೀಡಿದ್ದ ಕಾಂಗ್ರೆಸ್ ನಾಯಕರ ಬಾಯಿ ಇದೀಗ ಬಂದ್ ಆಗಿದೆ ಎಂದು ಲೇವಡಿ ಮಾಡಿದ ರವಿ, ತಮ್ಮದೇ ಸರಕಾರದಲ್ಲಿ ತೆರಿಗೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿಯ ತೀರ್ಮಾನವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರವಿ ಆಗ್ರಹಿಸಿದರು.

ಧರಣಿಯಲ್ಲಿ ನಗರಸಭಾ ಉಪಾಧ್ಯಕ್ಷ ಸುಧೀರ್, ಜಿ.ಪಂ. ಸದಸ್ಯರಾದ ರವೀಂದ್ರಬೆಳವಾಡಿ, ಬೀಕನಹಳ್ಳಿ ಸೋಮಣ್ಣ, ಮುಖಂಡರಾದ ಎಚ್.ಡಿ ತಮ್ಮಯ್ಯ, ವರಸಿದ್ದಿವೇಣುಗೋಪಾಲ್, ಮಧುಕುಮಾರ್ ರಾಜ್‍ಅ ರಸ್, ಮಹಿಳಾ ಮುಖಂಡರಾದ ಪುಷ್ಪಾ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News