ಮಧುಕರ್ ಶೆಟ್ಟಿ ಜಿಲ್ಲೆ ಕಂಡ ಅಪರೂಪದ ಪೊಲೀಸ್ ಅಧಿಕಾರಿ: ಬಿಎಸ್ಪಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಾಧಾಕೃಷ್ಣ

Update: 2019-01-07 18:32 GMT

ಚಿಕ್ಕಮಗಳೂರು, ಜ.7: ಮಧುಕರ್ ಶೆಟ್ಟಿ ಅವರು ಜಿಲ್ಲೆ ಕಂಡ ಅಪರೂಪದ ದಕ್ಷ, ಪ್ರಾಮಾಣಿಕ, ಜನಪರ ಪೊಲೀಸ್ ಅಧಿಕಾರಿಯಾಗಿದ್ದರು. ಅವರ ಅಗಲಿಕೆಯಿಂದ ಇಡೀ ನಾಡಿಗೆ ಭಾರೀ ನಷ್ಟವಾಗಿದೆ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಜನಪರವಾಗಿ ಹೇಗೆ ಕಾರ್ಯ ನಿರ್ವಹಿಸಬಹುದೆಂದು ಪೊಲೀಸ್ ಇಲಾಖೆಗೆ ಕಲಿಸಿಕೊಟ್ಟವರೇ ಮಧುಕರ್ ಶೆಟ್ಟಿ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಭಿಪ್ರಾಯಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಯಲಗುಡಿಗೆ ಗ್ರಾಮದ ನಿರಾಶ್ರಿತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಶ್ರದ್ಧಾಂಜಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಅವರು ಇನ್ನಿಲ್ಲವಾದರೂ ಚಿಕ್ಕಮಗಳೂರು ಜಿಲ್ಲೆಗೆ ಅವರು ನೀಡಿದ ಕೊಡುಗೆ ಅಮರವಾಗಿರುತ್ತದೆ. ಈ ಕಾರಣಕ್ಕೆ ಅವರನ್ನು ಜಿಲ್ಲೆಯ ಜನರು ಮರೆಯಲು ಸಾಧ್ಯವೇ ಇಲ್ಲ ಎಂದ ಅವರು, ಓರ್ವ ಪೊಲೀಸ್ ಅಧಿಕಾರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಮಾತ್ರ ಇರುತ್ತದೆ. ಆದರೆ ಮಧುಕರ್ ಶೆಟ್ಟಿ ಅವರು ತಮ್ಮ ಕಾರ್ಯವ್ಯಾಪ್ತಿಯ ಪರಿದಿ ಒಳಗೆ ಕೆಲಸ ಮಾಡದೇ ಪೊಲೀಸ್ ಠಾಣೆಗಳನ್ನೇ ಜನರ ಬಳಿಗೆ ಕರೆದೊಯ್ಯುವಂತಹ ಮಾದರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ ಎಂದರು. 

ಭೂಮಾಲಕರ, ಪ್ರಭಾವಿ ರಾಜಕಾರಣಿಗಳ ಅಣತಿಯಂತೆ ಕುಣಿಯುವ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಜಿಲ್ಲೆ ಎಸ್ಪಿಯಾಗಿ ಆಗಮಿಸಿದ್ದ ಅವರಿಂದಾಗಿ ಜಿಲ್ಲೆಯ ಪೊಲೀಸರು ಬದಲಾಗಿದ್ದರು. ಅವರ ಕಾರ್ಯ ವೈಖರಿಗೆ ರಾಜಕಾರಣಿಗಳು, ಪ್ರಭಾವಿಗಳು, ಭೂ ಮಾಲಕರೇ ದಂಗಾಗಿದ್ದರು. ಇಂತಹ ಅಧಿಕಾರಿಯ ಕಾರ್ಯವೈಖರಿ, ಜೀವನ ಮೌಲ್ಯ, ಆದರ್ಶಗಳನ್ನು ಯುವಜನತೆ ಹಾಗೂ ಯುವ ಸರಕಾರಿ ಇಲಾಖಾಧಿಕಾರಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಿಪಿಐ ಮುಖಂಡ ಅಮ್ಜದ್ ಮಾತನಾಡಿ, ಶೋಷಿತರು, ಬಡವರು, ಕಾರ್ಮಿಕರ ಬಗ್ಗೆ ಮಧುಕರ್ ಶೆಟ್ಟಿ ಅವರಿಗೆ ಅಪಾರ ಕಾಳಜಿ ಇತ್ತು. ಹುಲ್ಲೆಮನೆ ಗ್ರಾಮಸ್ಥರು ಅರಣ್ಯ ಸಮಸ್ಯೆ ಇಂದ ಬೀದಿಪಾಲಾಗುವ ಸಂದರ್ಭದಲ್ಲಿ ಮಧುಕರ್ ಶೆಟ್ಟಿ ಅವರ ಮಾನವೀಯತೆಯ ಮುಖ ಜಿಲ್ಲೆಯ ಜನರಿಗೆ ಪರಿಚಯವಾಯಿತು. ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ ಕೆಲ ಕಂದಾಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದಾಗ ಖುದ್ದು ಮಧುಕರ್ ಶೆಟ್ಟಿ ಅವರೇ ಕಾಳಜಿ ವಹಿಸಿ ಡಿಸಿಯಾಗಿದ್ದ ಹರ್ಷಗುಪ್ತ ಅವರ ಸಹಕಾರದಿಂದ ಯಲಗುಡಿಗೆಯಲ್ಲಿ ಭೂಮಾಲಕನಿಂದ ಒತ್ತುವರಿಯಾಗಿದ್ದ ಸರಕಾರಿ ಭೂಮಿಯನ್ನು ಖುಲ್ಲಾ ಮಾಡಿಸಿ ಬೀದಿಪಾಲಾಗುತ್ತಿದ್ದವರಿಗೆ ಆಸರೆಯೊದಗಿಸಿದ್ದರು. ಅಲ್ಲಿನ ನಿವಾಸಿಗಳು ಅಧಿಕಾರಿಗಳ ಮೇಲಿನ ಅಭಿಮಾನಕ್ಕೆ ತಮ್ಮ ಗ್ರಾಮಕ್ಕೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕಾರಣ ಮಾಡಿರುವುದು ಶ್ಲಾಘನೀಯ ಕೆಲಸ ಎಂದರು. 

ರೈತಸಂಘದ ಮುಖಂಡ ಗುರುಶಾಂತಪ್ಪ, ಸಿಪಿಐಎಂಲ್ ಪಕ್ಷದ ರುದ್ರಯ್ಯ, ದಸಂಸ ರಾಜರತ್ನಂ, ಶ್ರೀನಿವಾಸ್, ವಸಂತ್‍ ಕುಮಾರ್ ಮತ್ತಿತರರು ಮಾತನಾಡಿದರು. ಬೈರಿಗದ್ದೆ ರಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ನಿರಾಶ್ರಿತರ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿ.ಮಣಿಕಂಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ರೇಖಾ ಅನಿಲ್, ವಿವಿಧ ಸಂಘಟನೆಗಳ ಮುಖಂಡರಾದ ಮುರುಗುಂದ ಪ್ರಸನ್ನ, ಉಮೇಶ್‍ಕುಮಾರ್, ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News