ಇನ್ಫೋಸಿಸ್ ನಿಂದ ಕೊಡಗು ಸಂತ್ರಸ್ತರಿಗೆ ಹೊಲಿಗೆ ಯಂತ್ರ ವಿತರಣೆ: ಸ್ವಾವಲಂಬಿಗಳಾಗಲು ಜಿಲ್ಲಾಧಿಕಾರಿ ಕರೆ

Update: 2019-01-09 11:30 GMT

ಮಡಿಕೇರಿ, ಜ.8: ಕೊಡಗಿನ ಮಳೆಹಾನಿ ಸಂತ್ರಸ್ತ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಹೊಲಿಗೆ ಯಂತ್ರಗಳನ್ನು ನೀಡಿದೆ.

ನಗರದ ಕೊಡಗು ಸೇವಾ ಕೇಂದ್ರದ ಸಭಾಂಗಣದಲ್ಲಿ ಸುಮಾರು 40 ಮಹಿಳೆಯರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ಸಂತ್ರಸ್ತ ಮಹಿಳೆಯರ ಜೀವನಾಧಾರಕ್ಕೆ ಸಹಕಾರ ನೀಡುತ್ತಿರುವ ಇನ್ಫೋಸಿಸ್ ಫೌಂಡೇಶನ್ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಿರುವ ಕೊಡಗು ಸೇವಾ ಕೇಂದ್ರದ ಕಾರ್ಯ ಶ್ಲಾಘನೀಯವೆಂದರು.

ಹೊಲಿಗೆ ಯಂತ್ರವನ್ನು ಉಪಯೋಗಿಸಲು ಬಾರದವರಿಗೆ ಕೂಡಿಗೆಯಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಉಚಿತ ವಸತಿ ಗೃಹಗಳ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಂತ್ರಸ್ತ ಮಹಿಳೆಯರು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ನಗರದ ರಾಜಾಸೀಟು ಉದ್ಯಾನವನದ ಬಳಿ ನೂತನ ಮಳಿಗೆಯನ್ನು ಆರಂಭಿಸಲಾಗಿದ್ದು, ಇದರ ಲಾಭವನ್ನು ಕೂಡ ಪಡೆದುಕೊಳ್ಳುವಂತೆ ತಿಳಿಸಿದರು.

ಜಿ. ಪಂ. ಮುಖ್ಯ ಕಾರ್ಯನಿರ್ವಹಣಧಿಕಾರಿ ಕೆ.ಲಕ್ಷ್ಮೀ ಪ್ರಿಯ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಸಮವಸ್ತ್ರ ಹೊಲಿಯಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದ್ದು, ಉತ್ತಮ ರೀತಿಯಲ್ಲಿ ಹೊಲಿಗೆ ಕೆಲಸ ಮಾಡುವ ಸಂತ್ರಸ್ತರಿಗೆ ಈ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದರು.

ಇದೇ ಸಂದರ್ಭ ಸಂತ್ರಸ್ತ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. 

ಇನ್ಫೋಸಿಸ್ ಫೌಂಡೆಷನ್‍ನ ಪ್ರಮುಖರಾದ ಸುಧೀರ್, ರೋಶನ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಕೊಡಗು ಸೇವಾ ಕೇಂದ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News