ಸಿಇಟಿ ಪರೀಕ್ಷೆ ಆನ್‌ಲೈನ್ ಮೂಲಕ ನಡೆಸಲು ಚಿಂತನೆ: ಸಚಿವ ಜಿ.ಟಿ.ದೇವೇಗೌಡ

Update: 2019-01-09 14:13 GMT

ಬೆಂಗಳೂರು, ಜ. 9: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಸಿಇಟಿಯನ್ನು ಆನ್‌ಲೈನ್ ಮೂಲಕವೇ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆ ಈಗ ಉತ್ತಮವಾಗಿ ನಡೆಯುತ್ತಿದೆ. ಆದರೂ, ಪರೀಕ್ಷೆಗಳಲ್ಲಿ ಕೆಲವೊಂದು ಅಕ್ರಮಗಳಾಗುತ್ತಿವೆ ಎಂಬ ಸಂಶಯಗಳು ಕೆಲವರಲ್ಲಿದೆ ಎಂದರು. ಹೀಗಾಗಿ ಅಕ್ರಮ ತಡೆಗೆ ಸಿಇಟಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದರಿಂದ ಯಾವುದೇ ಅಕ್ರಮಗಳಿಗೂ ಅವಕಾಶ ಇರುವುದಿಲ್ಲ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಉಪನ್ಯಾಸಕರ ನೇಮಕ: ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರು ಹುದ್ದೆ ಸೇರಿದಂತೆ 3800 ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಶೀಘ್ರದಲ್ಲೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 390 ಪ್ರಾಂಶುಪಾಲರ ಹುದ್ದೆಯನ್ನು ಉಪನ್ಯಾಸಕರ ಹುದ್ದೆ ಭರ್ತಿ ಸಂದರ್ಭದಲ್ಲಿ ತುಂಬಲಾಗುವುದು. ಯಾವುದೇ ಕಾಲೇಜುಗಳಲ್ಲಿಯೂ ಉಪನ್ಯಾಸಕರ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ದೇವೇಗೌಡ ಹೇಳಿದರು.

ಕುಲಪತಿಗಳ ಸಭೆ: ವಿಶ್ವ ವಿದ್ಯಾನಿಲಯಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು 1200 ಕೋಟಿ ರೂ.ಗಳನ್ನು ಸರಕಾರ ನೀಡಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಎಲ್ಲ ವಿ.ವಿ.ಗಳ ಕುಲಪತಿಗಳ ಸಭೆ ಕರೆಯಲಾಗಿದೆ ಎಂದು ದೇವೇಗೌಡ ತಿಳಿಸಿದರು.

ಫೆಬ್ರವರಿ ಅಂತ್ಯದೊಳಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಕುಲಪತಿಗಳ ನೇಮಕ ಪೂರ್ಣಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡ, ಸರಕಾರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ. ಕನ್ನಡ ಮಾಧ್ಯಮ ಶಾಲೆ ಜತೆಗೆ ಆಂಗ್ಲಮಾಧ್ಯಮ ಶಾಲೆಗಳು ಇರುತ್ತವೆ ಎಂದರು.

ಸಿಎಂ ಕುಮಾರಸ್ವಾಮಿ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯ ಹೊಂದಬೇಕು ಎಂಬ ಕಾರಣಕ್ಕೆ ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದ್ದಾರೆ. ಆದರೆ, ಇದನ್ನು ಕೆಲವರು ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎಂದು ದೇವೇಗೌಡ ಇದೇ ವೇಳೆ ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News