ಮೈಸೂರು ಮಿನರಲ್ಸ್ ಅಧ್ಯಕ್ಷೆಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರ ಸ್ವೀಕಾರ

Update: 2019-01-09 14:15 GMT

ಬೆಂಗಳೂರು, ಜ.9: ರಾಜ್ಯ ಖನಿಜ ನಿಗಮ(ಮೈಸೂರು ಮಿನರಲ್ಸ್ )ದ ಅಧ್ಯಕ್ಷೆಯಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬುಧವಾರ ಶಾಂತಿನಗರದಲ್ಲಿರುವ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿರುವ ಪಕ್ಷದ ನಾಯಕರು ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಡಿರುವ ಗೊಂದಲದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ತಾಯಿಯ ನಾಲ್ಕು ಮಕ್ಕಳಲ್ಲೆ ಹೊಂದಾಣಿಕೆ ಇರುವುದಿಲ್ಲ. ಒಂದು ಪಕ್ಷ ಅಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆಯ ಆಶೀರ್ವಾದ ಮಾಡಿದ್ದಾರೆ. ಅವರ ಸೇವೆ ಮಾಡಿಕೊಂಡಿರುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿಲ್ಲ. ಆದರೂ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.

ಬೇನಾಮಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯವರು ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವ ಬೇನಾಮಿ ಆಸ್ತಿಯನ್ನು ಮಾಡಿಲ್ಲ. ಎರಡು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದೇನೆ. ಇನ್ನೂ ಶಾಸಕಿಯಾಗಿ ನಾನು ಕಣ್ಣು ಬಿಟ್ಟಿರಲಿಲ್ಲ. ರಾಜಕೀಯವಾಗಿ ನನ್ನ ಮೇಲೆ ದಾಳಿ ನಡೆದಿದ್ದು ಎಲ್ಲರಿಗೂ ಗೊತ್ತಿದೆ ಎಂದರು.

ಲೆಕ್ಕಪರಿಶೋಧಕರು ನನ್ನ ಸಹೋದರ. ಆದಾಯ ತೆರಿಗೆ ಇಲಾಖೆಯ ನೋಟಿಸ್ ಕುರಿತು ಅವರು ನೋಡಿಕೊಳ್ಳುತ್ತಾರೆ. ಬೇನಾಮಿ ಆಸ್ತಿ ಬಗ್ಗೆ ಮತ್ತೆ ನನ್ನ ವಿರುದ್ಧ ದೂರು ದಾಖಲು ಆಗಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News