ಸೌದಿ ತರುಣಿಗೆ ಆಶ್ರಯ ನೀಡುವಂತೆ ವಿಶ್ವಸಂಸ್ಥೆಯಿಂದ ಆಸ್ಟ್ರೇಲಿಯಕ್ಕೆ ಶಿಫಾರಸು

Update: 2019-01-09 15:04 GMT

ಸಿಡ್ನಿ, ಜ. 9: ಸೌದಿ ಅರೇಬಿಯದಿಂದ ಪರಾರಿಯಾಗಿರುವ ತರುಣಿ ರಹಾಫ್ ಮುಹಮ್ಮದ್ ಅಲ್-ಕುನೂನ್ ಓರ್ವ ನೈಜ ನಿರಾಶ್ರಿತೆಯಾಗಿದ್ದಾರೆ ಎನ್ನುವುದನ್ನು ವಿಶ್ವಸಂಸ್ಥೆ ಪತ್ತೆಹಚ್ಚಿದೆ ಹಾಗೂ ಅವರಿಗೆ ಆಶ್ರಯ ನೀಡುವಂತೆ ಆಸ್ಟ್ರೇಲಿಯಕ್ಕೆ ಸೂಚಿಸಿದೆ ಎಂದು ಆಸ್ಟ್ರೇಲಿಯದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

‘‘ರಹಾಫ್‌ ರನ್ನು ನಿರಾಶ್ರಿತ ಪುನರ್ವಸತಿಗಾಗಿ ಪರಿಗಣಿಸುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಆಸ್ಟ್ರೇಲಿಯವನ್ನು ಕೋರಿದೆ’’ ಎಂದು ಆಸ್ಟ್ರೇಲಿಯ ಗೃಹ ವ್ಯವಹಾರಗಳ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್‌ರ ಈ ನಿರ್ಧಾರವು 18 ವರ್ಷದ ಸೌದಿ ತರುಣಿಗೆ ಮಹತ್ವದ ಆಶಾಕಿರಣವಾಗಿದೆ. ಈಗ ಅವರು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಇದ್ದಾರೆ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ‌ರ ಇತರ ಶಿಫಾರಸುಗಳಂತೆಯೇ, ಇದನ್ನೂ ಸಾಮಾನ್ಯ ರೀತಿಯಲ್ಲಿ ಪರಿಗಣಿಸಲಾಗುವುದು ಎಂದು ಆಸ್ಟ್ರೇಲಿಯ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದೆ.

ನನ್ನ ಶೋಷಕ ಕುಟುಂಬ ಸದಸ್ಯರಿಂದ ಪಾರಾಗಿ ಬಂದಿರುವುದಾಗಿ ರಹಾಫ್ ಸಾಮಾಜಿಕ ಮಾಧ್ಯಮಗಳ ಮೂಲಕ ಈಗಾಗಲೇ ವಿವರಣೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಆಶ್ರಯ ನೀಡಲು ಆಸ್ಟ್ರೇಲಿಯ ಮುಕ್ತ ಮನೋಭಾವ

ರಹಾಫ್‌ರ ಮನವಿಯನ್ನು ಅಂಗೀಕರಿಸಲಾಗುವುದು ಎಂಬ ಪ್ರಬಲ ಸೂಚನೆಯನ್ನು ಆಸ್ಟ್ರೇಲಿಯದ ಅಧಿಕಾರಿಗಳು ನೀಡಿದ್ದಾರೆ.

‘‘ಅವರು ನಿರಾಶ್ರಿತೆ ಎನ್ನುವುದು ಸಾಬೀತಾದರೆ, ಅವರಿಗೆ ಮಾನವೀಯ ವೀಸಾ ನೀಡುವ ಬಗ್ಗೆ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ’’ ಎಂದು ಆಸ್ಟ್ರೇಲಿಯ ಆರೋಗ್ಯ ಸಚಿವ ಗ್ರೆಗ್ ಹಂಟ್ ವಿಶ್ವಸಂಸ್ಥೆಯ ನಿರ್ಧಾರ ಹೊರಬೀಳುವ ಮುನ್ನವೇ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News