'ಭಾರತ್ ಬಂದ್'ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ

Update: 2019-01-09 17:11 GMT

ಶಿವಮೊಗ್ಗ, ಜ. 9: ಮೋಟಾರು ವಾಹನ ತಿದ್ದುಪಡಿ ವಿಧೇಯಕ ವಿರೋಧಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮಂಗಳವಾರದಿಂದ ಕರೆ ನೀಡಿರುವ ಎರಡು ದಿನಗಳ 'ಭಾರತ್ ಬಂದ್'ಗೆ ಬುಧವಾರ ಕೂಡ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರ್ವಜನಿಕರಿಂದ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. 

ಮಂಗಳವಾರ ರಸ್ತೆಗಿಳಿಯದ ಸರ್ಕಾರಿ ಬಸ್‍ಗಳು ಬುಧವಾರ ಎಂದಿನಂತೆ ಸಂಚಾರ ನಡೆಸಿದವು. ಪರ ಊರಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿತ್ತು. ಹಾಗೆಯೇ ಸರ್ಕಾರಿ ಸಿಟಿ ಬಸ್‍ಗಳ ಸಂಚಾರ ಆರಂಭಗೊಂಡಿದ್ದರಿಂದ ನಗರ-ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಹಕಾರಿಯಾಗಿತ್ತು. 

ಆದರೆ ಮಂಗಳವಾರದ ರೀತಿಯಲ್ಲಿ, ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಾಜರಿದ್ದ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿತ್ತು. ಬ್ಯಾಂಕ್ ನೌಕರರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ, ಬುಧವಾರ ಕೂಡ ಬ್ಯಾಂಕ್ ಸಂಬಂಧಿತ ಕೆಲಸ ಕಾರ್ಯಗಳು ಅಸ್ತವ್ಯಸ್ತವಾಗಿದ್ದವು. ಇದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಯಿತು. 

ಹಾಗೆಯೇ ಅಂಚೆ ಇಲಾಖೆ ನೌಕರರು ಬಂದ್ ಬೆಂಬಲಿಸಿದ್ದರಿಂದ, ಸತತ ಎರಡನೇ ದಿನವೂ ಅಂಚೆ ವಿತರಣೆ ಏರುಪೇರಾಗಿತ್ತು. ಅಂಚೆ ಕಚೇರಿಗಳ ಬಾಗಿಲು ತೆರೆದಿದ್ದರೂ ಸಿಬ್ಬಂದಿಗಳ ಸಂಖ್ಯೆ ವಿರಳವಾಗಿತ್ತು. ನಾಗರಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿತ್ತು. 

ಉಳಿದಂತೆ ನಗರದಲ್ಲಿ ಶಾಲಾ-ಕಾಲೇಜು, ಸರ್ಕಾರಿ-ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆ ಸುಗಮವಾಗಿತ್ತು. ವ್ಯಾಪಾರ-ವಹಿವಾಟು, ವಾಹನಗಳ ಸಂಚಾರ ಎಂದಿನಂತಿತ್ತು. ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಮಂಗಳವಾರ ನಗರದ ವಿವಿಧೆಡೆ ಕಂಡುಬಂದಿದ್ದ ನೌಕರರ ಸಂಘಟನೆಗಳ ಪ್ರತಿಭಟನೆಯ ಬಿಸಿ, ಎರಡನೇ ದಿನ ಕಡಿಮೆಯಾಗಿತ್ತು. ಆದರೆ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ನಡೆಸಿದ ಬೃಹತ್ ಪ್ರತಿಭಟನೆ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News