36ರ ದಲಿತ ಮಹಿಳೆಯಿಂದ ಶಬರಿಮಲೆ ದರ್ಶನ ?

Update: 2019-01-10 06:48 GMT

ತಿರುವನಂತಪುರ, ಜ. 10: ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮೊಟ್ಟಮೊದಲ ಬಾರಿಗೆ ಕಳೆದ ವಾರ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದರ್ಶನ ಪಡೆದ ಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ನಡುವೆಯೇ, ಮಂಗಳವಾರ ಮುಂಜಾನೆ ತಾನು ಕೂಡಾ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ದರ್ಶನ ಪಡೆದಿದ್ದಾಗಿ 36 ವರ್ಷದ ದಲಿತ ಹಕ್ಕುಗಳ ಹೋರಾಟಗಾರ್ತಿ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.

50 ವರ್ಷ ವಯಸ್ಸಿನ ಮಹಿಳೆಯಂತೆ ನಟಿಸಿ ತಾನು ಅಯ್ಯಪ್ಪ ದರ್ಶನ ಪಡೆದಿದ್ದಾಗಿ ಪಿ. ಮಂಜು (36) ಹೇಳಿಕೊಂಡಿದ್ದಾರೆ.

ಶಬರಿಮಲೆ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿರುವ ಭಾವಚಿತ್ರವನ್ನು ಕೂಡಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಪ್ರತಿಭಟನಾಕಾರರನ್ನು ದಾಟಿಕೊಂಡು ಅವರು ದರ್ಶನ ಮಾಡುವ ಚಿತ್ರ ಅದಾಗಿದ್ದರೂ, ಪೊಲೀಸರು ದೃಢಪಡಿಸಿಲ್ಲ.

ಪೊಲೀಸರ ರಕ್ಷಣೆ ಇಲ್ಲದೇ ನಡೆದುಕೊಂಡು ಹೋಗಿ 18 ಪವಿತ್ರ ಮೆಟ್ಟಲುಗಳನ್ನು ಏರಿದ ಬಳಿಕವೇ ತಾನು ದರ್ಶನ ಪಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ದರ್ಶನ ಪಡೆಯಲು ವಿಫಲ ಯತ್ನ ನಡೆಸಿದ 20 ಮಂದಿ ಮಹಿಳೆಯರ ತಂಡದಲ್ಲಿ ಇವರೂ ಇದ್ದರು ಎನ್ನುವುದು ಗಮನಾರ್ಹ. ದಕ್ಷಿಣ ಕೇರಳದ ಕೊಲ್ಲಂನಲ್ಲಿ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು.

"ಅಯ್ಯಪ್ಪ ದರ್ಶನದ ಪ್ರಯತ್ನ ಫಲಪ್ರದವಾಗಿದೆ. ನಾನು ಮಾಮೂಲಿ ಭಕ್ತಳಂತೆ ಬಂದಿದ್ದೆ. ಆದರೆ ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಬೇಕಾಯಿತು. ನನ್ನ ಕೂದಲಿಗೆ ಬಿಳಿ ಬಣ್ಣ ಹಚ್ಚಿ, ವಯಸ್ಸಾದ ಮಹಿಳೆಯಂತೆ ವೇಷ ಧರಿಸಿದ್ದೆ. ಯಾರೂ ನನ್ನನ್ನು ಗಮನಿಸಲಿಲ್ಲ. ಭವಿಷ್ಯದಲ್ಲಿ ಕೂಡಾ ನಾನು ಭೇಟಿ ನೀಡುತ್ತೇನೆ" ಎಂದು ಮಂಜು ಹೇಳಿಕೊಂಡಿದ್ದಾರೆ. ಇವರು ಮಹಿಳಾ ದಲಿತ ಒಕ್ಕೂಟದ ಸದಸ್ಯೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News