ಹಿಂದಿ ಗೊತ್ತಿಲ್ಲದ ತಮಿಳುನಾಡಿನ ವ್ಯಕ್ತಿಯನ್ನು ನಿಂದಿಸಿದ ಇಮಿಗ್ರೇಶನ್ ಅಧಿಕಾರಿ: ಆರೋಪ

Update: 2019-01-10 10:21 GMT

ಮುಂಬೈ, ಜ.10:  ತಮಿಳು ಮತ್ತು ಇಂಗ್ಲಿಷ್ ಮಾತ್ರ ಗೊತ್ತಿದ್ದು, ಹಿಂದಿ ಗೊತ್ತಿಲ್ಲ ಎಂಬ ಕಾರಣಕ್ಕೆ  ತನ್ನನ್ನು ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಕೌಂಟರ್ ಅಧಿಕಾರಿಯೊಬ್ಬರು ಅವಮಾನಿಸಿದ್ದಾರೆಂದು ತಮಿಳುನಾಡಿನ ವ್ಯಕ್ತಿಯೊಬ್ಬರು ಟ್ವಿಟರ್ ಮೂಲಕ ದೂರಿದ್ದಾರೆ. ಇದೀಗ ಇಮಿಗ್ರೇಶನ್ ಇಲಾಖೆ ಅಧಿಕಾರಿಯ ವಿರುದ್ಧ ತನಿಖೆ ಆರಂಭಿಸಿದೆ.

ಪ್ರಯಾಣಿಕ ಇಮಾನ್ಯುವೆಲ್ ಸ್ಯಾಮುವೆಲ್ ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಈ ಬಗ್ಗೆ ವಿವರಿಸಿದ್ದು, ತಾನು ದೂರಿಕೊಂಡ ನಂತರವೂ ಅಧಿಕಾರಿ ನಿಂದಿಸುವುದನ್ನು ಮುಂದುವರಿಸಿದ್ದರು ಎಂದು ಆರೋಪಿಸಿದ್ದಾರೆ.

“ನನ್ನ ವಿಮಾನ ರಾತ್ರಿ 1 ಗಂಟೆಗೆ ಹೊರಡಲಿದ್ದುದರಿಂದ ನಾನು ಅಲ್ಲಿಂದ  ತೆರಳಿದ್ದೆ. ಇಲ್ಲದೇ ಹೋಗಿದ್ದರೆ ಔಪಚಾರಿಕವಾಗಿ ಅಲ್ಲಿಯೇ ದೂರು ನೀಡುತ್ತಿದ್ದೆ. ಇವರಂತಹ ಮೂರ್ಖರು ಹೇಗೆ ಸೇವೆಗೆ ಸೇರಿಕೊಳ್ಳುತ್ತಾರೆ?'' ಎಂದು ಬರೆದಿರುವ ಇಮಾನ್ಯುವೆಲ್, ತಮ್ಮ ಟ್ವೀಟ್ ನಲ್ಲಿ  ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನೂ ಟ್ಯಾಗ್ ಮಾಡಿದ್ದಾರೆ.

“ಹಿಂದಿ ಗೊತ್ತಿಲ್ಲ ಎಂಬ ಕಾರಣಕ್ಕೆ ಯಾರಿಗೂ ಈ ರೀತಿ ಆಗಬಾರದು. ಮುಂಬೈ ಸಿಎಸ್‍ಟಿಯ ಕೌಂಟರ್ 33ರ ಎಮಿಗ್ರೇಶನ್ ಅಧಿಕಾರಿಯ ಅಹಂಕಾರದ ವರ್ತನೆ. ಇದು ಇಂತಹ ಕೊನೆಯ ಘಟನೆಯಾಗಬಹುದೆಂಬ ಆಶಾವಾದ''ಎಂದೂ ಅವರು ಬರೆದಿದ್ದಾರೆ.

“ಸ್ಯಾಮುವೆಲ್ ಅವರ ಇಮಿಗ್ರೇಶನ್ ಪರಿಶೀಲನೆ ನಾಲ್ಕು ನಿಮಿಷಗಳಲ್ಲಿ ಮುಗಿದಿದೆ, ಸಂಬಂಧಿತ ಅಧಿಕಾರಿಯನ್ನು ತಾತ್ಕಾಲಿಕವಾಗಿ ವಜಾಗೊಳಿಸಲಾಗಿದೆ. ಘಟನೆಗೆ ವಿಷಾದವಿದೆ, ತನಿಖೆ  ನಡೆಸಲಾಗುತ್ತಿದೆ. ಅಧಿಕಾರಿಗೆ ಸಾಫ್ಟ್ ಸ್ಕಿಲ್ ತರಬೇತಿ ನೀಡಲಾಗುವುದು'' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News