ವಿವೇಕ ರೈ ಕಟ್ಟಿದ ಮಹಾಮನೆ- ಅಕ್ಕರ ಮನೆ

Update: 2019-01-10 18:43 GMT

ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವಿನಾಭಾವವಾಗಿ ಬೆರೆತುಕೊಂಡಿರುವವರು ಡಾ. ವಿವೇಕ ರೈ. ಬರೇ ಕರಾವಳಿಗೆ ಸೀಮಿತವಾಗದೆ ಕರ್ನಾಟಕ ಮಾತ್ರವಲ್ಲದೆ ಜರ್ಮನಿಯವರೆಗೂ ಕನ್ನಡದ ಕಂಪನ್ನು ಹರಡಿದವರು. ಸಾಹಿತ್ಯ, ಸಂಶೋಧನೆ, ಅಂಕಣ, ಶಿಕ್ಷಣ, ಉಪನ್ಯಾಸ.... ಹೀಗೆ ವಿವೇಕ ರೈ ಅಕ್ಷರವೆಂಬ ಮಹಾ ಮನೆಯ ಹತ್ತು ಹಲವು ಕೋಣೆಗಳ ವಾರಸುದಾರರು. ಇದೀಗ 72ನೇ ವಸಂತವನ್ನು ತಲುಪಿರುವ ವಿವೇಕ ರೈ ಅವರನ್ನು ಮತ್ತೊಮ್ಮೆ ಕಾಣಿಸುವ ಪ್ರಯತ್ನವನ್ನು ಬಹುರೂಪಿ ಪ್ರಕಾಶನ ಹೊರತಂದಿರುವ ‘ಅಕ್ಕರ ಮನೆ’ ಮಾಡಿದೆ. ಜಿ. ಎನ್. ಮೋಹನ್ ಅವರು ಹೇಳುವಂತೆ ‘‘ವಿವೇಕ ರೈ ಅವರ ಹೆಜ್ಜೆ ಗುರುತುಗಳನ್ನು ಹಿಡಿದಿಡುವ ಪುಟ್ಟ ಪ್ರಯತ್ನ ಈ ಅಕ್ಕರ ಮನೆ. ಇಲ್ಲಿ ಅವರು ಬರೆದ ಮೊದಲ ಕಥೆ, ಮೊದಲ ಪ್ರಬಂಧ, ಮೊದಲ ಹಾಡಿನಿಂದ ಹಿಡಿದು ಅವರು ಈಗ ಬರೆಯುತ್ತಿರುವ ಅತ್ಯಂತ ಜನಪ್ರಿಯ ‘ಉದಯವಾಣಿ’ ಅಂಕಣದವರೆಗಿನ ಬರಹಗಳಿವೆ. ಒಂದು ರೀತಿಯಲ್ಲಿ ಇವು ವಿವೇಕ ರೈ ಅವರ ಬರಹ ಲೋಕದ ಹೆಜ್ಜೆಗುರುತುಗಳ ಲೋಕ. ತುಳು ಗಾದೆ, ಒಗಟು, ಫೇಸ್‌ಬುಕ್ ಬರಹ, ಅಂಕಣ, ಮುನ್ನುಡಿ, ಅನುವಾದ, ಚಿತ್ರಗೀತೆ, ವ್ಯಕ್ತಿಚಿತ್ರ, ವಿಶ್ಲೇಷಣೆ, ಚುಟುಕುಗಳು ಎಲ್ಲವೂ ಇವೆ...’’
ಇಲ್ಲಿರುವ 72 ಬರಹಗಳು ವಿವೇಕ ರೈ ಅವರ ಬದುಕಿನ ಅಗಾಧ ಅನುಭವಗಳನ್ನು, ತಿಳುವಳಿಕೆಗಳನ್ನು ತೆರೆದಿಡು ತ್ತದೆ. ವಡ್ಡರ್ಸೆ ರಘುರಾಮ ಶೆಟ್ಟಿಯವರ ಮುಂಗಾರು ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಹುಮುಖ್ಯ ಲೇಖನಗಳು ಇದರಲ್ಲಿವೆ. ನಾಡಿನ ಪತ್ರಿಕೆಗಳ ಜೊತೆಗೆ ಅವರು ಹೊಂದಿರುವ ಸಂಬಂಧ ಮತ್ತು ಕಾಲ-ದೇಶಕ್ಕೆ ಪೂರಕವಾಗಿ ಸ್ಪಂದಿಸುತ್ತಾ ಬಂದಿರುವ ಅವರೊಳಗಿನ ಸಂವೇದನಾ ಶೀಲತೆಯನ್ನು ಇಲ್ಲಿನ ಲೇಖನಗಳು ನಮಗೆ ಪರಿಚಯಿಸುತ್ತವೆ. ವರ್ತಮಾನಕ್ಕೆ ಸಂಬಂಧಿಸಿ ಇವರ ಸ್ಪರ್ಶಕ್ಕೆ ಸಿಕ್ಕದ ವಿಷಯಗಳೇ ಇಲ್ಲ ಎನ್ನುವ ಷ್ಟರ ಮಟ್ಟಿಗೆ ಲೇಖನಗಳಲ್ಲಿ ವೈವಿಧ್ಯವನ್ನು ಕಾಣುತ್ತೇವೆ. ಪ್ರಕೃತಿ, ಸಂಸ್ಕೃತಿ, ಅರ್ಥಶಾಸ್ತ್ರ, ರಾಜಕೀಯ, ಪ್ರವಾಸ, ಪುಸ್ತಕ, ಮನುಷ್ಯ ಸಂಬಂಧ ಒಂದೊಂದು ಲೇಖನ ಒಂದೊಂದು ಅನುಭವವನ್ನು ನಮಗೆ ನೀಡುತ್ತದೆ.
ವಿವೇಕ ರೈ ಅವರೇ ಹೇಳುವಂತೆ ‘‘....ಏಳು ದಶಕ ದಾಟಿ ಸಿಂಹಾವಲೋಕನ ಮಾಡಿದಾಗ ಕಟ್ಟಿದ, ನಿಂತ, ಬಿಟ್ಟ ಮನೆಗಳೆಲ್ಲ ಕಾಲ, ಸ್ಥಳ, ಪರಿಸರ ಕಳಚಿಕೊಂಡು ಮುಖಾ ಮುಖಿಯಾಗಿ ಒಟ್ಟಿಗೆ ಬಂದು ನಿಂತಾಗ ನನ್ನ ಪಾಲಿಗೆ ‘ಬೆರಗು’ ಒಂದೇ ಭಾವ ವಿಭಾವ ಮತ್ತು ಸಂಚಾರೀ ಭಾವ. ದಾಟಿಕೊಂಡು ಬಂದ ಒಂದೊಂದು ಮನೆಯೂ ಒಂದೊಂದು ಕೋಣೆಯಾಗಿ ಅವೆಲ್ಲವನ್ನು ಖುಷಿ ಬಂದಂತೆ ಜೋಡಿಸಿ ಮಕ್ಕಳಾಟದಂತೆ ‘ಮಹಾಮನೆ’ ಒಂದನ್ನು ಕಟ್ಟುವ ಪ್ರೀತಿಯ ಕಟ್ಟುವಿಕೆ ನಿಮ್ಮ ಮುಂದಿದೆ’’
ಬಹುರೂಪಿ, ಬೆಂಗಳೂರು ಹೊರತಂದಿ ರುವ ಈ ಕೃತಿಯ ಒಟ್ಟು ಪುಟಗಳು 200. ಆಸಕ್ತರು 7019182729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News