ಪ್ರವಾದಿ ನಿಂದನೆ: ಅಜಿತ್ ಬಂಧನಕ್ಕೆ ಆಗ್ರಹಿಸಿ ಕೊಡಗು ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

Update: 2019-01-10 18:43 GMT

ಮಡಿಕೇರಿ, ಜ.10: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನ ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತದಿಂದ ಮೆರವಣಿಗೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿ ಅಜಿತ್ ಹನುಮಕ್ಕನವರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಮಹಮ್ಮದ್ ಪೈಂಗಬರ್ ಅವರು ವಿಶ್ವಕ್ಕೆ ಮಾದರಿಯಾದವರು ಎಂದು ಸ್ವತ : ಶ್ರೀಕೃಷ್ಣ ಹಾಗೂ ಮಹಾನ್ ವ್ಯಕ್ತಿಗಳು ಹೇಳಿರುವ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹೀಗಿರುವಾಗ ಪರ್ತಕರ್ತ ಅಜಿತ್ ಅವರು ಯಾವುದೇ ಮಾಹಿತಿ ಇಲ್ಲದೆ, ನಿಂದಿಸಿರುವುರುವುದನ್ನು ಇಡೀ ಮುಸ್ಲಿಂ ಸಮುದಾಯವೇ ಖಂಡಿಸುತ್ತದೆ ಎಂದರು. ಸಮಾಜವನ್ನು ಒಳಿತಿನೆಡೆಗೆ ಕೊಂಡೊಯ್ಯಬೇಕಾದ ಪತ್ರಕರ್ತ ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡಲು ಹೊರಟಿರುವುದು ಕಾನೂನಿಗೆ ವಿರುದ್ಧವಾದ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ತಕ್ಷಣ ಅಜಿತ್ ಹನುಮಕ್ಕನವರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ, ಕೋಮು ಸೌಹಾರ್ದತೆಗೆ ಹೆಸರಾದ ಭಾರತದಲ್ಲಿ ಇತ್ತೀಚೆಗೆ ಧರ್ಮ ನಿಂದನೆಯಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಇದು ಅಶಾಂತಿಯನ್ನು ಮೂಡಿಸುವ ಕೃತ್ಯವಾಗಿದೆ ಎಂದು ಆರೋಪಿಸಿದರು. 

ಕೆ.ಎಸ್.ಭಗವಾನ್ ಅವರ ಪುಸ್ತಕದ ಬಗ್ಗೆ ಮಾತನಾಡುವಾಗ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ವಿನಾಕಾರಣ ಮುಸ್ಲಿಮರ ಆರಾಧ್ಯ ದೈವವಾಗಿರುವ ಪ್ರವಾದಿಯವರ ಬಗ್ಗೆ ಅವಹೇಳನ ಮಾಡುವ ಮೂಲಕ ಭಗವಾನ್‍ಗೂ ತನಗೂ ವ್ಯತ್ಯಾಸವಿಲ್ಲ ಎಂಬಂತೆ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಂ ಸಮಾಜವು ಪತ್ರಕರ್ತ ಅಜಿತ್ ಅವರ ವಿರುದ್ಧ ನೂರಾರು ದೂರುಗಳನ್ನು ನೀಡಿದ್ದರೂ ಪೊಲೀಸರು ಅವರನ್ನು ಬಂಧಿಸದೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ತಕ್ಷಣ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. 

ಒಕ್ಕೂಟದ ಕುಶಾಲನಗರ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ, ಮಡಿಕೇರಿ ಬದ್ರಿಯಾ ಜಮಾಆತ್ ಅಧ್ಯಕ್ಷ ಯೂಸುಫ್ ಹಾಜಿ, ಮಡಿಕೇರಿ ಜಾಮಿಯಾ ಮಸೀದಿ ಅಧ್ಯಕ್ಷ ಎಂ.ಎ.ನಝೀರ್ ಹಾಜಿ, ಮದೀನ ಮಸೀದಿ ಕಾರ್ಯದರ್ಶಿ ಮುಕ್ತಾರ್ ಹಾಜಿ, ಮಡಿಕೇರಿಯ ಎಂ.ಎಂ.ಮಸೀದಿಯ ಅಧ್ಯಕ್ಷ ಎಂ.ಎಂ.ಹಾರೂನ್ ಹಾಜಿ, ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಪಿ.ಎಂ.ಕಾಸಿಂ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮಡಿಕೇರಿ ಹಾಗೂ ಕುಶಾಲನಗರದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯ ಸಂದರ್ಭ ಜನರಲ್ ತಿಮ್ಮಯ್ಯ ವೃತ್ತಕ್ಕೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News