"ಮೇಲ್ವರ್ಗಕ್ಕೆ ಶೇ.10 ಆರ್ಥಿಕ ಮೀಸಲಾತಿ ಸಂವಿಧಾನ ವಿರೋಧಿ"

Update: 2019-01-11 13:51 GMT

ಚಿಕ್ಕಮಗಳೂರು, ಜ.11: ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿರುವ ಮೇಲ್ವರ್ಗದವರಿಗೆ ಶೇ.10 ಆರ್ಥಿಕ ಮೀಸಲಾತಿ ಮಸೂದೆ ಅಂಬೇಡ್ಕರ್ ಅವರ ಮೀಸಲಾತಿ ಪರಿಕಲ್ಪನೆಗೆ ತದ್ವಿರುದ್ಧವಾಗಿದ್ದು, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ದಲಿತರು ಹಾಗೂ ತಳ ಸಮುದಾಯದ ಹಿತಾಸಕ್ತಿಗೆ ಮಾರಕವಾಗಿರುವ ಈ ಮಸೂದೆಗೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದೆಂದು ಒತ್ತಾಯಿಸಿ ಶುಕ್ರವಾರ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್ ಹಾಗೂ ಸದಸ್ಯರಾದ ಬಸವರಾಜು, ಪರಮೇಶ್, ಉಮೇಶ್ ಮತ್ತು ರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಜಾತಿ ವ್ಯವಸ್ಥೆ ಈ ದೇಶದ ಬಹುದೊಡ್ಡ ತಳ ಸಮುದಾಯಗಳು ಬಹುದೊಡ್ಡ ಶೃತೃವಾಗಿದೆ. ಈ ಸಮುದಾಯಗಳಿಗೆ ಆರ್ಥಿಕ ಸಮಾನತೆ ನೀಡುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ಆಧರಿತ ಮೀಸಲಾತಿಯ ಪರಿಕಲ್ಪನೆಯ ಮಹತ್ವ ಪ್ರತಿಪಾದಿಸಿದರು.

ಸಂವಿಧಾನದ 16(4) ಪರಿಚ್ಛೇದದನ್ವಯ ಜಾತಿ ಆಧರಿತ ಮೀಸಲಾತಿ ವ್ಯವಸ್ಥೆಯನ್ನು ಜಾರಿ ಮಾಡಿರುವ ಅಂಬೇಡ್ಕರ್ ಅವರಿಗೆ ತುಳಿತಕ್ಕೊಳಗಾದ ಸಮುದಾಯಗಳನ್ನು ಸಾಮಾಜಿಕವಾಗಿ ಮೇಲೆತ್ತುವ ಉದ್ದೇಶ ಮಾತ್ರ ಇತ್ತು. ಆದರೆ ಅಂಬೇಡ್ಕರ್ ಅವರ ಮೀಸಲಾತಿ ಪರಿಕಲ್ಪನೆಯ ಉದ್ದೇಶವನ್ನೇ ಅಣಕಿಸುವ ರೀತಿಯಲ್ಲಿ ಕೇಂದ್ರ ಸರಕಾರ ಸಂಸತ್‍ನಲ್ಲಿ ಮೇಲ್ವರ್ಗದವರಿಗೆ ಶೇ.10 ಆರ್ಥಿಕ ಮೀಸಲಾತಿ ಖೋಟಾ ಮಸೂದೆ ಅಂಗೀಕರಿಸಿದೆ. ಈ ಮಸೂದೆ ಅಂಬೇಡ್ಕರ್ ಸಂವಿಧಾನಕ್ಕೆ ವಿರುದ್ಧವಾಗಿದ್ದು, ರಾಷ್ಟ್ರಪತಿಗಳು ಈ ಮಸೂದೆಗೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದೆಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಜಾರಿ ಮಾಡಿರುವ ಆರ್ಥಿಕ ಮೀಸಲಾತಿ ಸಂವಿಧಾನದ 16(4) ಪರಿಚ್ಚೇದ ಹಾಗೂ 1932ರಲ್ಲಿ ಅಂಬೇಡ್ಕರ್-ಗಾಂಧಿ ನಡುವೆ ನಡೆದ ಪೂನಾ ಒಪ್ಪಂದಕ್ಕೆ ವಿರುದ್ಧವಾಗಿದೆ. ಜಾತಿ ತಾರತಮ್ಯ, ಜಾತಿ ಶೋಷಣೆ, ಜಾತಿ ದಬ್ಬಾಳಿಕೆಗೆ ಗುರಿಯಾದ ಜನರನ್ನು ಸಾಮಾಜಿಕವಾಗಿ ಮೇಲೆತ್ತುವ ಪರಿಕಲ್ಪನೆ ಮೀಸಲಾತಿಯದ್ದಾಗಿದ್ದು, ಕೇಂದ್ರದ ಈ ಆರ್ಥಿಕ ಮೀಸಲಾತಿ ಮಸೂದೆ ಮೀಸಲಾತಿ ಸದಾಶಯಕ್ಕೆ ವಿರುದ್ಧವಾಗಿದೆ ಎಂದ ಅವರು, ಇದುವರೆಗೂ ಜಾರಿಯಾದ ಜಾತಿ ಆಧರಿತ ಮೀಸಲಾತಿಯಿಂದ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ. ಈ ಸಮುದಾಯದವರು ಉನ್ನತ ಹುದ್ದೆಗಳಲ್ಲಿದ್ದರೂ ಅವರು ಜಾತಿ ತಾರತಮ್ಯ, ಅವಮಾನಗಳಿಂದ ಮುಕ್ತರಾಗಿಲ್ಲ. ಮೀಸಲಾತಿಯ   ಕೋಟವನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲ ಹಂತದಲ್ಲೂ ಭರ್ತಿ ಮಾಡಿಲ್ಲ. 1ನೇ ದರ್ಜೆಯ ಹುದ್ದೆಗಳಲ್ಲಿ ಈ ವರ್ಗಗಳ ಪ್ರಮಾಣ ಸಾಂಕೀತಿಕವಾಗಿದ್ದರೇ, 2ನೇ ದರ್ಜೆಯ ಹುದ್ದೆಗಳಲ್ಲಿ ಈ ವರ್ಗಗಳ ಪ್ರಮಾಣ ತೀರಾ ಕಡಿಮೆ ಇದೆ. 2ನೇ ದರ್ಜೆಯಲ್ಲಿ ಶೇ.20 ರಷ್ಟಿದ್ದು, 4ನೇ ದರ್ಜೆಯಲ್ಲಿ ಶೇ.70ರಷ್ಟಿದೆ. ಪೊಲೀಸ್, ಮಿಲಿಟರಿ, ನ್ಯಾಯಾಂಗದಂತಹ ಉನ್ನತಾಡಳಿತದಲ್ಲಿ ಮೇಲ್ವರ್ಗದವರೇ ಶೇ.90ರಷ್ಟಿದ್ದಾರೆ. ಹೀಗಿದ್ದೂ ಶೇ.10  ಆರ್ತಿಕ ಮೀಸಲಾತಿ ಘೋಷಣೆ ತಳ ಸಮುದಾಯಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ಆರೋಪಿದರು.

ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುವವರೆಗೂ ಅಂಬೇಡ್ಕರ್ ಸಂವಿಧಾನದಂತೆ ಜಾತಿ ಆಧರಿತ ಮೀಸಲಾತಿ ಸಮರ್ಥನೀಯವಾಗಿದೆ ಎಂದ ಅವರು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ಆರ್ಥಿಕ ಮೀಸಲಾತಿಯನ್ನು ಜಾರಿಗೊಳಿಸುವುದು ದೇಶದ ಶೋಷಿತ ಸಮುದಾಯಗಳ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಈ ಕಾರಣಕ್ಕೆ ಪಕ್ಷವು ಈ ಮಸೂದೆಯನ್ನು ವಿರೋಧಿಸುತ್ತಿದ್ದು, ರಾಷ್ಟ್ರಪತಿ ಕೋವಿಂದ್ ಅವರು ಈ ಮಸೂದೆಯ ಹಿಂದಿರುವ ಹುನ್ನಾರ ಅರ್ಥೈಸಿಕೊಂಡು ಅಂಕಿತ ಹಾಕಬಾರದೆಂದ ಒತ್ತಾಯಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News