ಮಂಗನಕಾಯಿಲೆ ಬಾಧಿತ ಪ್ರದೇಶಗಳಲ್ಲಿ ಕಟ್ಟೆಚ್ಚರ

Update: 2019-01-11 18:05 GMT

► 763 ಪ್ರಕರಣಗಳಲ್ಲಿ 17 ದೃಢ

ಶಿವಮೊಗ್ಗ, ಜ. 11: ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಆಯ್ದ ಪ್ರದೇಶಗಳಲ್ಲಿ ಕಂಡುಬಂದಿರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರ ಜೊತೆಗೆ ಬಾಧಿತ ಪ್ರದೇಶದ ನಿವಾಸಿಗಳಿಗೆ ಅಗತ್ಯ ಲಸಿಕೆ ಪೂರೈಸಿ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿ ಸಲಾಗಿದ್ದ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಳ್ಳ ಲಾಗಿರುವ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ನಿರಂತರ ಚಿಕಿತ್ಸೆ ಹಾಗೂ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ. ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್, ಆ್ಯಂಬುಲೆನ್ಸ್, ಹೆಚ್ಚುವರಿ ಸಿಬ್ಬಂದಿ, ವೈದ್ಯರ ನಿಯೋಜನೆ ಹಾಗೂ ಹೆಚ್ಚುವರಿ ವಾಹನಗಳನ್ನು ಒದಗಿಸಲಾಗಿದೆ ಎಂದರು.

ಮಂಗನ ಕಾಯಿಲೆಗೆ ಸಂಬಂಧಿಸಿದ ಪ್ರಕರಣಗಳು ಗೋಚರವಾದಲ್ಲಿ, ಸಕಾಲಿಕ ಚಿಕಿತ್ಸೆ ನೀಡಲು ವೈದ್ಯರ ತಂಡ ಸದಾ ಜಾಗೃತವಾಗಿರಲಿದೆ. ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ ಎಂದರು.

ಈ ಹಿಂದೆ ಕಾಯಿಲೆಯ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ 63 ರೋಗಿಗಳಲ್ಲಿ ಗುಣಮುಖರಾದ 33 ರೋಗಿಗಳನ್ನು ಸರಕಾರಿ ವೆಚ್ಚದಲ್ಲಿ ಮನೆಗೆ ತಲುಪಿಸಲಾಗಿದೆ. ಅದರಲ್ಲಿ 25 ರೋಗಿಗಳನ್ನು ಮಂಗನಕಾಯಿಲೆ ಭಾದಿತರಲ್ಲ ಎಂದು ಗುರುತಿಸಲಾಗಿದೆ ಎಂದ ಅವರು, ಪ್ರಸ್ತುತ ಸಾಗರದಲ್ಲಿ 4, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 1 ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಮತ್ತು ಕೋಣಂದೂರು ಪ್ರದೇಶಗಳಲ್ಲಿ ಚಿಕಿತ್ಸೆ ಹಾಗೂ ಜಾಗೃತಿಗಾಗಿ ಕಾರ್ಯಕ್ರಮ ನಿರಂತರವಾಗಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ವೈದ್ಯಾ ಧಿಕಾರಿ ಡಾ.ದಿನೇಶ್ ಮಾತನಾಡಿ, ಈವರೆಗೆ ಮಂಗನಕಾಯಿಲೆಗೆ 536 ರೋಗಿಗಳು ಹೊರರೋಗಿಗಳಾಗಿ ಹಾಗೂ 102 ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಜ್ವರಬಾದಿತ ಒಟ್ಟು 763 ರೋಗಿಳಲ್ಲಿ ಶಂಕಿತ 131 ರೋಗಿಗಳನ್ನು ಪರಿಶೀಲಿಸಲಾಗಿದ್ದು, 17ಪ್ರಕರಣಗಳು ದೃಢಪಟ್ಟಿವೆ. ಈವರೆೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಯಿಂದ 6ಜನ ಮರಣ ಹೊಂದಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಮೃತ ಪ್ರತಿ ಕುಟುಂಬಕ್ಕೆ ರೂ.10ಲಕ್ಷ ರೂ. ಪರಿಹಾರಧನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್‌ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು.

 ಸಭೆಯಲ್ಲಿ ಆಹಾರ ಇಲಾಖೆಯಿಂದ ಪಡಿತರ ಕಾರ್ಡು ವಿತರಣೆ, ವಿವಿಧ ಅಭಿವೃದ್ದಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಲ್ಲಿ ಅಪೂರ್ಣವಾಗಿರುವ ಕೊಳವೆಬಾವಿಗಳ ನಿರ್ಮಾಣ, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಕಾರ್ಯಾ ರಂಭ, ತುರ್ತು ಕುಡಿಯುವ ನೀರು, ಕೃಷಿ ಚಟುವಟಿಕೆ ಮುಂತಾದ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಗನಾಯ್ಕಾ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಳೆ ರೋಗ: 18.50 ಕೋ.ರೂ. ಪರಿಹಾರ ಬಿಡುಗಡೆ

ಕಳೆದ ಸಾಲಿನಲ್ಲಿ ಅಡಿಕೆ ಕೊಳೆರೋಗಕ್ಕೆ ತುತ್ತಾದ ಸುಮಾರು 10 ಸಾವಿರ ಹೆಕ್ಟೇರ್ ಬೆಳೆಗೆ 18.50 ಕೋಟಿ ರೂ. ಪರಿಹಾರ ಧನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಪೈಕಿ ಈವರೆಗೆ 3.50 ಕೋಟಿ ರೂ.ಬಿಡುಗಡೆಯಾಗಿದ್ದು, ಸುಮಾರು 25 ಸಾವಿರ ರೈತರಲ್ಲಿ ಸುಮಾರು 4,500 ರೈತರ ಖಾತೆಗೆ ಹಣ ಜಮಾ ಆಗಿದೆ. ಉಳಿಕೆ ಪರಿಹಾರಧನ ಸರಕಾರ ಬಿಡುಗಡೆಯಾದ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ಯೋಗೀಶ್ ಸಭೆಗೆ ಮಾಹಿತಿ ನೀಡಿದರು.

139 ಶಾಲಾ ಕಟ್ಟಡಗಳ ದುರಸ್ತಿ

ಜಿ ಲ್ಲೆಯ 7 ತಾಲೂಕುಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ 139 ಶಾಲಾ ಕಟ್ಟಡಗಳನ್ನು ಗುರುತಿಸಿ ಜೀರ್ಣಾ ಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಹಿಂದುಳಿದ ಶಾಲೆಯ ಉಸ್ತುವಾರಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸುಮಂಗಳ ಸಭೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News