ಸಿಬಿಐ ಮುಖ್ಯಸ್ಥ ವರ್ಮಾ ವಜಾ: ಚೌಕೀದಾರನ ಬಣ್ಣ ಬಹಿರಂಗ

Update: 2019-01-12 09:17 GMT

ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ, ನ್ಯಾಯಾಂಗ ಅಲೋಕ್‌ವರ್ಮಾ ಅವರನ್ನು ಮತ್ತೆ ಸಿಬಿಐ ಮುಖ್ಯಸ್ಥನ ಸ್ಥಾನಕ್ಕೆ ತಂದು ಕೂರಿಸಿದರೂ, ಸರಕಾರ ಅಡ್ಡದಾರಿಯ ಮೂಲಕ ತನ್ನ ದಾರಿಯ ಮುಂದಿದ್ದ ಮುಳ್ಳನ್ನು ತೆಗೆದು ಹಾಕಿದೆ. ಸುಪ್ರೀಂಕೋರ್ಟ್‌ನಿಂದ ಮರು ನೇಮಕಗೊಂಡ 48 ಗಂಟೆಗಳೊಳಗೆ ನರೇಂದ್ರಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಅವರನ್ನು ವಜಾಗೊಳಿಸಿದೆ. ಸಮಿತಿಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪಗಳು ಕೂಡ ಸಿಬಿಐ ಸಂಸ್ಥೆಯ ನೆರವಿಗೆ ಬರಲಿಲ್ಲ. ವಿಪರ್ಯಾಸವೆಂದರೆ, ವರ್ಮಾ ಅವರನ್ನು ರಜೆಯಲ್ಲಿ ಕಳುಹಿಸಲು ಕೇಂದ್ರ ವಿಚಕ್ಷಣ ಆಯೋಗದ ಶಿಫಾರಸು ಕಾರಣ ಎಂದು ಈ ಹಿಂದೆ ಸರಕಾರ ಹೇಳಿತ್ತು. ಆ ಶಿಫಾರಸನ್ನೇ ನ್ಯಾಯಾಂಗ ತಿರಸ್ಕರಿಸಿ ಅವರನ್ನು ಮತ್ತೆ ಹುದ್ದೆಗೇರುವಂತೆ ಮಾಡಿತು. ಆದರೆ ಇದೀಗ ಸಿವಿಸಿ ಮಾಡಿದ ಆರೋಪಗಳ ಆಧಾರದಲ್ಲೇ ನರೇಂದ್ರ ಮೋದಿಯವರು ಮತ್ತೆ ವರ್ಮಾ ಅವರನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಸಿವಿಸಿಯೂ ವರ್ಮಾ ಮೇಲಿನ ಆರೋಪವನ್ನು ಸ್ಪಷ್ಟವಾಗಿ ಸೂಚಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಸಮಿತಿಯ ನಿರ್ಧಾರವು ಕೇಂದ್ರ ವಿಚಕ್ಷಣ ಆಯೋಗ ಅಲೋಕ್ ವರ್ಮಾ ವಿರುದ್ಧ ಮಾಡಿದ್ದ ಆರೋಪಗಳನ್ನು ಆಧರಿಸಿದೆ. ಆದರೆ ಸಿವಿಸಿ ಮುಖ್ಯ ಆರೋಪವನ್ನು ದೃಢೀಕರಿಸಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ. ವರ್ಮಾ ಅವರು ಉದ್ಯಮಿಯಿಂದ 2 ಕೋಟಿ ರೂ. ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ದೃಢೀಕರಿಸಲು ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ಸಾಂದರ್ಭಿಕ ಸಾಕ್ಷಿಗಳನ್ನು ಪರಿಶೀಲಿಸಲು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ವಿಚಕ್ಷಣ ವರದಿ ತಿಳಿಸಿತ್ತು. ಕೆಲವು ಗುಪ್ತಚರ ಮಾಹಿತಿಗಳ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪದ ಬಗ್ಗೆ ಸಿವಿಸಿ ವರದಿಯಲ್ಲಿ ಆರೋಪಗಳನ್ನು ದೃಢಪಡಿಸಲಾಗಿಲ್ಲ. ವರ್ಮಾ ವಿರುದ್ಧ ಮಾಡಲಾಗಿದ್ದ ಹತ್ತು ಆರೋಪಗಳಲ್ಲಿ ಮೂರನ್ನು ದೃಢೀಕರಿಸಲಾಗಿದೆ ಮತ್ತು ಆರು ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ದೃಢಪಡಿಸಲಾಗಿದೆ ಎಂದು ಹೇಳಲಾಗುತ್ತಿರುವ ಆರೋಪಗಳ ವಿಶ್ವಾಸಾರ್ಹತೆಯೂ ಸಂದೇಹಾಸ್ಪದವಾಗಿದೆ ಎಂದು ವಿಚಕ್ಷಣ ವರದಿ ತಿಳಿಸಿದೆ.

ಐಆರ್‌ಸಿಟಿಸಿ ಪ್ರಕರಣದಲ್ಲಿ ಸಂಶಯಿತನೊಬ್ಬನ ಹೆಸರನ್ನು ಎಫ್‌ಐಆರ್‌ನಲ್ಲಿ ಆರೋಪಿ ಎಂದು ದಾಖಲಿಸದಿರುವ ಆರೋಪವನ್ನು ಸಿವಿಸಿ ದೃಢೀಕರಿಸಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಾಟದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ ಎಂಬ ಆರೋಪ ಭಾಗಶಃ ಸಾಬೀತಾಗಿದೆ. ಕೇಂದ್ರ ವಿಚಕ್ಷಣ ಆಯೋಗದ ವರದಿಯ ಸತ್ಯಾಸತ್ಯತೆಯ ತನಿಖೆ ಒಂದು ಕಡೆಯಲ್ಲಿ ಮುಂದುವರಿಯುತ್ತಿರುವಂತೆಯೇ ಇನ್ನೊಂದೆಡೆ ವರ್ಮಾಗೆ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಮತ್ತು ವರ್ಮಾರ ಅಧಿಕಾರವನ್ನು ಅವರಿಗೆ ವಾಪಸ್ ನೀಡಬೇಕು ಎಂದು ಖರ್ಗೆ ವಾದಿಸಿದ್ದರು. ವರ್ಮಾ ಈಗಾಗಲೇ ತನ್ನ ಅಧಿಕಾರಾವಧಿಯ 77 ದಿನಗಳನ್ನು ಕಳೆದುಕೊಂಡಿರುವುದರಿಂದ ಅವರಿಗೆ ಅಷ್ಟೂ ದಿನಗಳ ಅಧಿಕಾರ ವಿಸ್ತರಣೆಯನ್ನೂ ನೀಡಬೇಕು ಎಂದು ಅವರು ಸಲಹೆ ನೀಡಿದ್ದರು. ಆದರೆ ಕೇಂದ್ರ ಸರಕಾರ ವರ್ಮಾ ಅವರನ್ನು ಸಿಬಿಐಯಿಂದ ದೂರ ಇಡಲೇ ಬೇಕಾದ ಅದಾವುದೋ ಅನಿವಾರ್ಯಕ್ಕೆ ಸಿಲುಕಿತ್ತು. ವರ್ಮಾ ವಿರುದ್ಧದ ಕೆಲವು ಆರೋಪಗಳ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದ್ದು ಅವರು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಯಲು ಅವಕಾಶ ನೀಡಲು ಸಾಧ್ಯವಿಲ್ಲ ಮತ್ತು ಅವರನ್ನು ವರ್ಗಾವಣೆ ಮಾಡಬೇಕು ಎಂಬ ನಿರ್ಧಾರವನ್ನು ಸಮಿತಿ ತೆಗೆದುಕೊಂಡಿದೆ.

ಸಮಿತಿ ಇಲ್ಲಿ ನೆಪ ಮಾತ್ರ. ಮೋದಿಯ ನಿರ್ಧಾರಕ್ಕೆ ಇನ್ನೋರ್ವ ನ್ಯಾಯಾಧೀಶರು ತಲೆಯಾಡಿಸಿದ್ದಾರೆ. ಇದು ಪರೋಕ್ಷವಾಗಿ ಸರ್ವಾಧಿಕಾರಿ ನಿರ್ಧಾರವೇ ಆಗಿದೆ. ಸಿಬಿಐಯ ನೈತಿಕ ಶಕ್ತಿಯ ಮೇಲೆ ಪ್ರಧಾನಿಯ ಕ್ರಮ ತೀವ್ರ ಆಘಾತವನ್ನುಂಟು ಮಾಡಿದೆ. ಇಲ್ಲಿ ವರ್ಮಾ ಅವರ ವರ್ಗಾವಣೆ ನೆಪ ಮಾತ್ರವಷ್ಟೇ. ನಿವೃತ್ತಿಗೆ ಇನ್ನೇನು ಒಂದು ತಿಂಗಳಿರುವಾಗ ವರ್ಮಾ ಅವರು ಈ ವರ್ಗಾವಣೆಯನ್ನು ಸ್ವೀಕರಿಸುವ ಸಾಧ್ಯತೆಗಳಿಲ್ಲ ಎನ್ನುವುದು ಸಮಿತಿಗೆ ಗೊತ್ತಿತ್ತು. ನಿರೀಕ್ಷೆಯಂತೆಯೇ ವರ್ಮಾ ಅವರು ರಾಜೀನಾಮೆ ನೀಡುವ ಮೂಲಕ ತಮ್ಮ ಸ್ಥಾನಕ್ಕೆ ಘನತೆಯನ್ನು ತಂದುಕೊಟ್ಟಿದ್ದಾರೆ. ಬಹುಶಃ ಕೇಂದ್ರದ ಗುಲಾಮಗಿರಿಗೆ ತಲೆಯೊಡ್ಡಿ ಸಿಬಿಐ ಅಧಿಕಾರಿಯಾಗಿ ಮುಂದುವರಿಯುವ ಬದಲು ರಾಜೀನಾಮೆ ನೀಡುವ ಮೂಲಕ ಅವರು ಹುತಾತ್ಮರಾಗಿದ್ದಾರೆ. ವರ್ಮಾ ಅವರಂತಹ ಅಧಿಕಾರಿಗಳೇ ಈ ದೇಶದ ಅಳಿದುಳಿದ ಭರವಸೆಗಳಾಗಿದ್ದಾರೆ.

 ಇಡೀ ಪ್ರಕರಣ ಒಂದನ್ನಂತೂ ದೇಶದ ಮುಂದೆ ಸಾಬೀತು ಪಡಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿಬಿಐಗೆ ಹೆದರಿದ್ದಾರೆ. ತನ್ನ ತಂತ್ರಗಳ ಮೂಲಕ ವರ್ಮಾ ಸಿಬಿಐ ಮುಖ್ಯಸ್ಥರಾಗದಂತೆ ನೋಡಿಕೊಳ್ಳುವುದರ ಹಿಂದೆ ಇರುವ ಕಾರಣವೂ ದೇಶದ ಜನರಿಗೆ ಸ್ಪಷ್ಟವಿದೆ. ರಫೇಲ್ ಹಗರಣದಲ್ಲಿ ಅವರು ಬೆತ್ತಲೆಯಾಗಿದ್ದಾರೆ. ಅಧಿಕಾರವೆನ್ನುವ ಬಟ್ಟೆಯ ಮರೆಯಲ್ಲಿ ಅವರು ತಮ್ಮ ಮಾನವನ್ನು ಮುಚ್ಚಿಕೊಂಡಿದ್ದಾರೆ. ಆ ಅಧಿಕಾರವನ್ನು ಗಣನೆಗೆ ತೆಗೆದುಕೊಳ್ಳದೆ, ರಫೇಲ್ ಹಗರಣದ ಬಗ್ಗೆ ತನಿಖೆಯ ಆಸಕ್ತಿಯನ್ನು ತೋರಿಸಿದ್ದೇ ವರ್ಮಾ ಅವರು ವಜಾಗೊಳ್ಳಲು ಮುಖ್ಯ ಕಾರಣ ಎನ್ನುವುದನ್ನು ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ತನ್ನನ್ನು ಚೌಕಿದಾರ ಎಂದು ಕರೆದುಕೊಳ್ಳುತ್ತಿದ್ದ ನರೇಂದ್ರ ಮೋದಿಯವರು, ಇದೀಗ ಈ ದೇಶದ ಅತ್ಯುನ್ನತ ಚೌಕಿದಾರ ಎಂದೇ ಗುರುತಿಸಲ್ಪಟ್ಟಿದ್ದ ಸಿಬಿಐ ಸಂಸ್ಥೆಯ ಮೇಲೆಯೇ ಅಧಿಕಾರ ಚಲಾಯಿಸಿದ್ದಾರೆ. ಮೋದಿಯವರು ನಿಜಕ್ಕೂ ಚೌಕಿದಾರನಾಗಿದ್ದರೆ ಸಿಬಿಐಗೆ ಯಾಕೆ ಹೆದರಬೇಕು? ಅನುಮಾನಾಸ್ಪದ ವ್ಯಕ್ತಿಯನ್ನು ಕಂಡು ಕಾವಲು ನಾಯಿ ಬೊಗಳಿದರೆ ಆ ನಾಯಿಯನ್ನು ಮನೆಯೊಡೆಯ ಖಂಡಿತವಾಗಿಯೂ ಹೊರ ಹಾಕುವುದಿಲ್ಲ. ಬದಲಿಗೆ ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಣೆಗೆ ಹಚ್ಚುತ್ತಾನೆ. ತನಿಖಾಧಿಕಾರಿಯನ್ನೇ ಕಿತ್ತು ಹಾಕುವ ಮೂಲಕ ವಿರೋಧಪಕ್ಷಗಳ ಆರೋಪಗಳನ್ನು ನರೇಂದ್ರ ಮೋದಿಯವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಚೌಕಿದಾರ ಯಾರು, ಕಳ್ಳ ಯಾರು ಎನ್ನುವುದು ಈ ಪ್ರಕರಣದಲ್ಲಿ ದೇಶಕ್ಕೆ ಸ್ಪಷ್ಟವಾಯಿತು.

ರಫೇಲ್ ಹಗರಣದ ಕುರಿತಂತೆ ಯಾವ ತನಿಖೆಗೂ ಸಿದ್ಧವಾಗದೆ, ಸಿಬಿಐಯಂತಹ ಸಂಸ್ಥೆಯ ಮೇಲೆಯೇ ಒತ್ತಡ ಹಾಕುತ್ತಿರುವ ಮೋದಿಯನ್ನು ದೇಶದ ಜನತೆ ಗಮನಿಸುತ್ತಿದೆ. ದೇಶದ ಭದ್ರತೆ, ರಕ್ಷಣೆಯ ಮುಂದೆ ಮೋದಿ ಯಾವ ರೀತಿಯಲ್ಲೂ ದೊಡ್ಡವರಲ್ಲ. ಈ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಮೋದಿಯವರು ರಿಲಯನ್ಸ್‌ನಂತಹ ಕಂಪೆನಿಗೆ ಸಹಾಯ ಮಾಡಿದ್ದಾರೆ ಎಂದಾದರೆ, ಹಿಂದೂಸ್ಥಾನ್ ಏರೋನಾಟಿಕ್ಸ್‌ನ್ನು ನಾಶ ಮಾಡಿ ಅದನ್ನು ರಿಲಯನ್ಸ್‌ಗಾಗಿ ದುರ್ಬಲಗೊಳಿಸುವಲ್ಲ್ಲಿ ಅವರ ಪಾತ್ರವಿದೆ ಎಂದಾದರೆ ಅವರು ಸರ್ವರೀತಿಯಲ್ಲಿ ಶಿಕ್ಷೆಗೆ ಅರ್ಹರೇ ಆಗಿದ್ದಾರೆ. ರಫೇಲ್ ಹಗರಣದಲ್ಲಿ ಮೋದಿಯ ಪಾತ್ರ ಇಲ್ಲ ಎಂದಾದರೆ ಅವರೇಕೆ ತನಿಖೆಗೆ ಅಂಜುತ್ತಿದ್ದಾರೆ? ತನಿಖೆಗೆ ಆದೇಶ ನೀಡಿ ತನ್ನ ನಿಷ್ಕಳಂಕ ವ್ಯಕ್ತಿತ್ವವನ್ನು ಸಾಬೀತು ಮಾಡುವುದು ಮೋದಿಗಿರುವ ಏಕೈಕ ದಾರಿ. ಒಬ್ಬ ವರ್ಮಾ ಅವರನ್ನು ಕಿತ್ತು ಹಾಕಿದಾಕ್ಷಣ ಈ ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆಯ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ ಎನ್ನುವುದು ಪ್ರಧಾನಿ ಮೋದಿಯವರಿಗೆ ಶೀಘ್ರವೇ ಮನವರಿಕೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News