ಪಂಕ್ತಿಬೇಧ ಆಚರಿಸಿದ ಪೇಜಾವರ ಶ್ರೀ 'ವ್ಯಾಧಿವರ' ಎಂದ ಮಹೇಶ್ ಚಂದ್ರ‌ಗುರು

Update: 2019-01-11 18:50 GMT

ಮೈಸೂರು,ಜ.11: ಉಡುಪಿಯಲ್ಲಿ ಇನ್ನೂ ಪಂಕ್ತಿಭೇದ ಆಚರಣೆಯಲ್ಲಿದ್ದು, ಅದಕ್ಕೆ ಉದಾಹರಣೆ ಎಂಬಂತೆ ಈ ದೇಶದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಲ್ಲಿಗೆ ಬಂದಂತಹ ಸಂದರ್ಭದಲ್ಲಿ ಶ್ರೀಹರಿ ಹೆಸರಿನಲ್ಲಿ ಇಂದು ಉಪವಾಸ ಎಂದು ಹೇಳಿ ಪೇಜಾವರಶ್ರೀ ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಾರೆ. ಈತ ಪೇಜಾವರ ಅಲ್ಲ, ವ್ಯಾದಿವರ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಪೇಜಾವರಶ್ರೀ ವಿರುದ್ಧ ಹರಿಹಾಯ್ದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಜಿಲ್ಲಾ ಘಟಕ ಮತ್ತು ಕನ್ನಡ ಸಾಹಿತ್ಯ ಕಲಾಕೂಟ, ಹಾಗೂ ಕೆ.ಎಸ್.ಶಿವರಾಮು ಸ್ನೇಹ ಬಳಗದ ವತಿಯಿಂದ ಶುಕ್ರವಾರ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಮಡೆಸ್ನಾನ ವಿರೋಧಿ ಹೋರಾಟಗಾರ ಹಾಗೂ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಶಿವರಾಮು ರವರಿಗೆ ಅಭಿನಂದನೆ ಹಾಗೂ ಮೌಢ್ಯ-ಸಾಮಾಜಿಕ ಹೋರಾಟಗಳು- ಒಂದು ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮನಾಥ್ ಕೋವಿಂದ್ ಒಬ್ಬ ದಲಿತ ಎಂಬ ಕಾರಣಕ್ಕೆ ಅವರ ಜೊತೆಯಲ್ಲಿ ಕುಳಿತು ಊಟ ಮಾಡಬೇಕಾಗುತ್ತದೆ ಎಂಬ ನೆಪವೊಡ್ಡಿ ಅಂದು ಶ್ರೀಹರಿ ನಾಮಸ್ಮರಣೆ, ಹಾಗಾಗಿ ಮಠದಲ್ಲಿ ಇಂದು ಉಪವಾಸ ಎಂಬ ಸುಳ್ಳನ್ನು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ವಾಭಿಮಾನಿಯಾದ್ದರಿಂದ ಅವರ ಊಟವನ್ನು ನಿರಾಕರಿಸಿ ಬಂದಿದ್ದಾರೆ ಎಂದು ಹೇಳಿದರು.

ಇಂದು ಪ್ರಶ್ನೆಮಾಡುವವರನ್ನು, ಪ್ರತಿಭಟಿಸುವವರನ್ನು ಜೈಲಿಗೆ ಕಳುಹಿಸುತ್ತಾರೆ ಮತ್ತು ಕೊಂದುಹಾಕುತ್ತಾರೆ. ಗುಲಾಮಗಿರಿ ಮಾಡುವವರಿಗೆ ರೆಡ್‍ಕಾರ್ಪೆಟ್ ಸ್ವಾಗತ ನೀಡುತ್ತಾರೆ. ಬಡವರ ಹೆಸರಿನಲ್ಲಿ ಹಣ ಪಡೆದು ಉದ್ಯಮಿಗಳನ್ನು ಈ ದೇಶದ ಪ್ರಧಾನಿ ಕಾಪಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇಂದು ವಿಶ್ವವಿದ್ಯಾಲಯಗಳು ಲೂಟಿಕೋರರ ದಾಳಿಕೋರರ ಸಂಸ್ಥೆಯಾಗಿದೆ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರು ಕೆಪಿಎಸ್‍ಸಿ ಮೂಲಕ ವಿವಿಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News