ಪ್ರಧಾನಿ ನೇತೃತ್ವದ ಸಮಿತಿಯಿಂದ ‘ಬಹಳ ಅವಸರ’ದ ನಿರ್ಧಾರ: ಸುಪ್ರೀಂ ನ್ಯಾಯಾಧೀಶ ಜಸ್ಟಿಸ್ ಪಟ್ನಾಯಕ್

Update: 2019-01-12 06:32 GMT

ಹೊಸದಿಲ್ಲಿ, ಜ.12: “ಪದಚ್ಯುತ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ ಹಾಗೂ ಕೇಂದ್ರ ಜಾಗೃತ ಆಯೋಗದ ಮಾತುಗಳೇ ಅಂತಿಮವಲ್ಲ” ಎಂದು  ವರ್ಮಾ ಪದಚ್ಯುತಗೊಳ್ಳುವುದಕ್ಕೆ ಕಾರಣವಾದ ಕೇಂದ್ರ ಜಾಗೃತ ಆಯೋಗದ ವಿಚಾರಣೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟಿನಿಂದ ನೇಮಿಸಲ್ಪಟ್ಟಿದ್ದ ಮಾಜಿ  ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎ.ಕೆ. ಪಟ್ನಾಯಕ್ ಹೇಳಿದ್ದಾರೆ.

 ಸುಪ್ರೀಂ ಕೋರ್ಟಿನಿಂದ ಸಿಬಿಐ ನಿರ್ದೇಶಕರಾಗಿ ವರ್ಮಾ ಮರುಸ್ಥಾಪನೆಗೊಂಡ ಎರಡೇ ದಿನಗಳಲ್ಲಿ ಅವರನ್ನು  ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಪದಚ್ಯುತಗೊಳಿಸಿದ ಕ್ರಮ ‘ಬಹಳ, ಬಹಳ ಅವಸರದ’ ಕ್ರಮವೆಂದು ಜಸ್ಟಿಸ್ ಪಟ್ನಾಯಕ್ ಬಣ್ಣಿಸಿದ್ದಾರೆ.

“ಭ್ರಷ್ಟಾಚಾರ ಕುರಿತಂತೆ ವರ್ಮಾ ವಿರುದ್ಧ ಯಾವುದೇ ಪುರಾವೆಯಿಲ್ಲ. ಇಡೀ ತನಿಖೆ ರಾಕೇಶ್ ಅಸ್ತಾನ ಅವರ ದೂರಿನ ಆಧಾರದ ಮೇಲೆ ನಡೆದಿತ್ತು. ಸಿವಿಸಿ ವರದಿಯಲ್ಲಿನ ಅಭಪ್ರಾಯಗಳು ನನ್ನದಲ್ಲ ಎಂದು ನಾನೀಗಾಗಲೇ ನನ್ನ ವರದಿಯಲ್ಲಿ ಹೇಳಿದ್ದೇನೆ'' ಎಂದು ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಜತೆ ಮಾತನಾಡಿದ ಜಸ್ಟಿಸ್ ಪಟ್ನಾಯಕ್ ಹೇಳಿದ್ದಾರೆ.

“ಉನ್ನತಾಧಿಕಾರ ಸಮಿತಿ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಸಮಿತಿಯ ನಿರ್ಧಾರ ಬಹಳ ಅವಸರದ್ದಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರೂ ಇರುವಾಗ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕಿತ್ತು'' ಎಂದು ಪಟ್ನಾಯಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸುಪ್ರೀಂ ಕೋರ್ಟ್ ನನಗೆ ಕೇವಲ ಮೇಲ್ವಿಚಾರಣೆಯ ಜವಾಬ್ದಾರಿ ನೀಡಿತ್ತು. ನಾನು ಹಾಜರಿದ್ದೆ. ವಿಚಾರಣೆ 14 ದಿನಗಳಲ್ಲಿ ಪೂರ್ಣಗೊಂಡಿತ್ತು. ನಂತರ ನಿರ್ಧಾರ ಕೈಗೊಳ್ಳುವುದು ಸುಪ್ರೀಂ ಕೋರ್ಟಿಗೆ ಬಿಟ್ಟ ವಿಚಾರವಾಗಿತ್ತು''ಎಂದಿದ್ದಾರೆ.

ಜನವರಿ 8ರಂದು ಅಲೋಕ್ ವರ್ಮಾ ಅವರನ್ನು ಮರುಸ್ಥಾಪಿಸಿ ಸುಪ್ರೀಂ ಕೋರ್ಟ್ ಆದೇಶ ನೀಡುವಾಗ ಸಿವಿಸಿ ವರದಿಯ ಬಗ್ಗೆ ಹೇಳಿದ್ದರೂ ಪಟ್ನಾಯಕ್ ವರದಿಯನ್ನು ಉಲ್ಲೇಖಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News