ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಐದು ಮಂಗಗಳ ಶವ ಪತ್ತೆ: ಮಂಗನ ಕಾಯಿಲೆ ಭೀತಿ

Update: 2019-01-12 11:39 GMT

ಶಿವಮೊಗ್ಗ, ಜ. 12: ಜಿಲ್ಲೆಯ ಸಾಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯ ಭೀತಿ ಮುಂದುವರಿದಿದೆ. ಸಾಗರದಲ್ಲಿ ಶಂಕಿತ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ತೀರ್ಥಹಳ್ಳಿ ತಾಲೂಕಿನ ಕೆಳಕೆರೆ ಗ್ರಾಮದಲ್ಲಿ ಮಂಗನ ಶವ ಪತ್ತೆಯಾಗಿದೆ.

ಸಾಗರ ವರದಿ: ತಾಲೂಕಿನ ಅರಲಗೋಡು ಗ್ರಾಮದ ಪೂಜಾ, ಸುಪ್ರೀತ್ ಹಾಗೂ ಮರಬಿಡಿ ಗ್ರಾಮದ ದೀಪಾ ಎಂಬವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸ್ಥಳೀಯ ವೈದ್ಯಾದಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಗುರುವಾರ ರಾತ್ರಿ ಮರಬಿಡಿ ಗ್ರಾಮದ ವಿಜಯಕುಮಾರ್ ಹಾಗೂ ಸುರೇಂದ್ರ ಎಂಬವರು ಕೂಡ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಸಂಪ, ಕರೂರು, ಮಂಚಾಲೆ, ಹಾರೆಗೊಪ್ಪ ಗ್ರಾಮದಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿವೆ. ಇನ್ನೊಂದೆಡೆ ಅರಲಗೋಡು ಸಮೀಪದ ಇಟ್ಟಿಗೆ ಹಾಗೂ ಅರೋಡಿ ಗ್ರಾಮದ ಕೆಲ ನಿವಾಸಿಗಳು ಮಂಗನ ಕಾಯಿಲೆಯ ಭೀತಿಯಿಂದ ಗ್ರಾಮ ತೊರೆದು ಬೇರೆಡೆ ತೆರಳಿದ್ದಾರೆ.

ತೀರ್ಥಹಳ್ಳಿ ವರದಿ: ತಾಲೂಕಿನ ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಮಂಗವೊಂದು ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ, ಮಂಗದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹಾಗೆಯೇ ಮಂಗ ಸತ್ತ ಸ್ಥಳದಲ್ಲಿ ಮೆಲಾಥಿಯನ್ ಪುಡಿಯನ್ನು ಸಿಂಪಡಿಸಿದ್ದಾರೆ.

ತಾಲೂಕಿನ ತೋಟದಕೊಪ್ಪ ಗ್ರಾಮದ ಓರ್ವನಲ್ಲಿ ಮಂಗನ ಕಾಯಿಲೆಯಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ  ಮಂಡಗದ್ದೆ ಹೋಬಳಿಯ ತೋಟದಕೊಪ್ಪ, ಹಳಗ, ಮೂರುಕೈ ಭಾಗದಲ್ಲಿ ಮಂಗನ ಕಾಯಿಲೆ ತಡೆಗಟ್ಟುವ ಲಸಿಕೆಯನ್ನು ಆರೋಗ್ಯ ಇಲಾಖೆ ಹಾಕಲಾರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News