ಹಾಸನ: ಕಸಾಪ 17ನೇ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ ಆಯ್ಕೆ

Update: 2019-01-12 18:35 GMT

ಹಾಸನ,ಜ.12: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ನಡೆದ ಕಸಾಪ ಕಾರ್ಯಕಾರಿ ಸಭೆಯಲ್ಲಿ ಜಿಲ್ಲಾ ಕಸಾಪ ಸಮ್ಮೇಳನ ಕುರಿತು ಚರ್ಚಿಸಿ, 17ನೇ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಎನ್.ಎಲ್. ಚನ್ನೇಗೌಡ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ ತಿಂಗಳಲ್ಲಿ ಜಿಲ್ಲಾ ಕಸಾಪ ಸಮ್ಮೇಳನ ನಡೆಯಲಿದ್ದು, ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಗೌರವಾಧ್ಯಕ್ಷ ರವಿನಾಕಲಗೂಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡುವ ಬಗ್ಗೆ ಸಲಹೆ ಕೇಳಲಾಯಿತು. ಈಗಾಗಲೇ ತಾಲೂಕು ಮಟ್ಟದ ಮತ್ತು ಹೋಬಳಿ ಮಟ್ಟದ ಎಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಮುಂದೆ ಜಿಲ್ಲಾ ಕಸಾಪ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಲು ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ ಎಂದರು.

ಸಾಹಿತಿ ಡಾ. ಮಳಲಿ ವಸಂತಕುಮಾರ್, ಡಾ.ಎ.ರಂಗಸ್ವಾಮಿ, ಎನ್.ಎಲ್. ಚನ್ನೇಗೌಡ, ಸುಶೀಲ ಸೋಮಶೇಖರ್, ಬಿ.ಎನ್. ರಾಮಸ್ವಾಮಿ, ಸುಬ್ಬು ಹೊಲೆಯರ್, ಎ.ಜಿ. ರತ್ನಕಾಳೇಗೌಡ ಒಟ್ಟು 7 ಜನ ಸಾಹಿತಿಗಳು ಸಂಭವನೀಯ ಸಮ್ಮೇಳನಾಧ್ಯಕ್ಷರಿದ್ದರು. ಶನಿವಾರ ಸಂಜೆ ನಡೆದ ಕಸಾಪ ಕಾರ್ಯಕಾರಿ ಸಭೆಯಲ್ಲಿ 7 ಜನ ಹಿರಿಯ ಸಾಹಿತಿಗಳ ಹೆಸರು ಚರ್ಚೆಗೆ ಬಂದು ಕೊನೆಯಲ್ಲಿ ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಕಸಾಪ ಜಿಲ್ಲಾ ಸಮ್ಮೇಳನಕ್ಕೆ ಸಲಹೆಯನ್ನು ಕೊಟ್ಟು ಯಶಸ್ವಿಗೊಳಿಸುವಂತೆ ಸಮ್ಮೇಳನಾಧ್ಯಕ್ಷರಲ್ಲಿ ಮನವಿ ಮಾಡಲಾಯಿತು.

ಸಭೆಯಲ್ಲಿ ಹಾಸನ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ, ಬೇಲೂರು ತಾಲೂಕು ಅಧ್ಯಕ್ಷ ಬಿ.ಎಂ ರವೀಶ್, ಆಲೂರು ತಾಲೂಕು ಅಧ್ಯಕ್ಷ ಶ್ರೀಕಾಂತ್, ಅರಸೀಕೆರೆ ತಾಲೂಕು ಅಧ್ಯಕ್ಷ ಶಿವಮೂರ್ತಿ, ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಸಾಹಿತಿ ಚಂದ್ರಕಾಂತ್ ಪಡೆಸೂರು, ಹೋಬಳಿ ಕಸಾಪ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಸಾಹಿತಿ ಗೊರೂರು ಅನಂತರಾಜು, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, ಕತ್ತಿಹಳ್ಳಿ ಪರಮೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News