ವಿಶ್ವದ ಅತಿದೊಡ್ಡ ಸೌರವಿದ್ಯುತ್ ಘಟಕಕ್ಕೆ ಲಡಾಖ್ ಪ್ರದೇಶ ಸಜ್ಜು

Update: 2019-01-13 03:44 GMT

ಹೊಸದಿಲ್ಲಿ, ಜ. 13: ನಿಸರ್ಗದ ಚೆಲುವು, ವರ್ಣರಂಜಿತ ಪರ್ವತಶ್ರೇಣಿಯ ಸೌಂದರ್ಯದ ಮೂಲಕ ವಿಶ್ವವಿಖ್ಯಾತವಾಗಿರುವ ಲಡಾಖ್ ಪ್ರದೇಶ ಇದೀಗ ತನ್ನ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ. ಸದ್ಯದಲ್ಲೇ ಇದು ವಿಶ್ವದ ಅತಿದೊಡ್ಡ ಸೌರವಿದ್ಯುತ್ ಉತ್ಪಾದನಾ ತಾಣ ಎನಿಸಿಕೊಳ್ಳಲಿದೆ.

ಕಾರ್ಗಿಲ್‌ನಿಂದ ದಕ್ಷಿಣಕ್ಕೆ ಸುಮಾರು 200 ಕಿಲೋಮೀಟರ್ ದೂರದಲ್ಲಿ ಇನ್ನೊಂದು ಬೃಹತ್ ಯೋಜನೆ ಸಿದ್ಧವಾಗುತ್ತಿದೆ. ಹೊಸ ಘಟಕ ಈ ಬಯಲು ಪ್ರದೇಶಕ್ಕೆ ಬೆಳಕು ಬೀರಲಿದೆ. ವಾರ್ಷಿಕ 12,650 ಟನ್‌ಗಳಷ್ಟು ಇಂಗಾಲ ಉಗುಳುವಿಕೆ ಇದರಿಂದ ಕಡಿಮೆಯಾಗಲಿದ್ದು, ಹಿಮನದಿಗಳ ಉಷ್ಣತೆ ಹೆಚ್ಚದಂತೆ ತಡೆಯುವಲ್ಲಿ ಸಹಕಾರಿಯಾಗಲಿದೆ. ವರ್ಷದಲ್ಲಿ 6-8 ತಿಂಗಳ ಕಾಲ ಹೊರಜಗತ್ತಿನ ಜತೆ ಸಂಪರ್ಕ ಕಡಿದುಕೊಳ್ಳುವ ಈ ಪ್ರದೇಶದ ಜನ ಇನ್ನು ಮೇಲೆ ಡೀಸೆಲ್ ಜನರೇಟರ್‌ಗಳನ್ನು ಅವಲಂಬಿಸಬೇಕಾಗಿಲ್ಲ. ಜತೆಗೆ ಇದು ಸ್ಥಳೀಯ ಜನತೆಗೆ ಜೀವನಾಧಾರ ಒದಗಿಸುವಲ್ಲೂ ಮಹತ್ವದ್ದಾಗಲಿದೆ.

ನವೀಕರಿಸಬಹುದಾದ ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತೀಯ ಸೌರ ವಿದ್ಯುತ್ ನಿಗಮ ಈ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿದ್ದು, ಲಡಾಖ್ ಘಟಕಕ್ಕೆ 5000 ಮೆಗಾವ್ಯಾಟ್ ಮತ್ತು ಕಾರ್ಗಿಲ್‌ಗೆ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಯೋಜನೆ 2023ರಲ್ಲಿ ಪೂರ್ಣವಾಗಲಿದ್ದು, 45 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಯೋಜನೆಯು ಈ ಕಡಿದಾದ ಗಡಿ ಪ್ರದೇಶದಲ್ಲಿ ಅಭಿವೃದ್ಧಿಗೆ ಕಾರಣವಾಗಲಿದ್ದು, ಸೌರಪ್ಯಾನಲ್‌ಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್ ಪರಿವರ್ತಕಗಳ ನಿರ್ವಹಣೆಯಂಥ ಕೌಶಲಯುಕ್ತ ಉದ್ಯೋಗವನ್ನೂ ಸ್ಥಳೀಯರಿಗೆ ಒದಗಿಸಲಿದೆ ಎಂದು ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ. ಲಡಾಖ್ ಪ್ರದೇಶ ಸುಮಾರು 25 ಸಾವಿರ ಮೆಗಾ ವ್ಯಾಟ್ ಸೌರವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ 1547 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಚೀನಾದ ನಿಂಗ್ಸಿಯಾ ಪ್ರದೇಶದಲ್ಲಿರುವ ತೆಂಗಿರ್ ಡೆಸರ್ಟ್ ಸೋಲಾರ್ ಪಾರ್ಕ್ ವಿಶ್ವದ ಅತಿದೊಡ್ಡ ಸೌರವಿದ್ಯುತ್ ಘಟಕ ಎನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News