ಕೊಡಗು ಪ್ರವಾಸಿ ಉತ್ಸವಕ್ಕೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಕರ್ಷಣೆ: ರಾಜಾಸೀಟ್ ರಸ್ತೆಯಲ್ಲಿ ಹಬ್ಬದ ವಾತಾವರಣ

Update: 2019-01-13 11:20 GMT

ಮಡಿಕೇರಿ,ಜ.13: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದಿಂದ ಮಡಿಕೇರಿಯಲ್ಲಿ ನಡೆಯುತ್ತಿರುವ ಪ್ರವಾಸಿ ಉತ್ಸವಕ್ಕೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಹೊಸ ಆಕರ್ಷಣೆಯನ್ನು ನೀಡಿತು.

ಮೂರನೇ ಹಾಗೂ ಕೊನೆ ದಿನವಾದ ರವಿವಾರ ನಗರದ ರಾಜಾಸೀಟು ರಸ್ತೆ ಮಾರ್ಗ ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಿಂದ ಕಂಗೊಳಿಸಿತು. ಬೆಳಗ್ಗೆ ಯೋಗ ಶಿಬಿರದಿಂದ ಆರಂಭವಾದ ಚಟುವಟಿಕೆಗಳು ಸಂಜೆಯ ವರೆಗೂ ವೈವಿಧ್ಯಮಯ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸಿತು.   

ಯೋಗ ಶಿಕ್ಷಕ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಂದೀಪ್ ಅವರ ನೇತೃತ್ವದಲ್ಲಿ ಜುಂಬ ನೃತ್ಯ, ಹೋಂ ಸ್ಟೇ ಅಸೋಶಿಯೇಷನ್, ಕಿಂಗ್ಸ್ ಆಫ್ ಕೂರ್ಗ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಟ್ರಾಪರ್ ಸ್ಟೋನ್ ತಂಡದಿಂದ ಬ್ಯಾಂಡ್, ವಿಕ್ರಮ್ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ, ದಿವಾಕರ ಮತ್ತು ತಂಡದವರಿಂದ ವಾಲಗ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಗಳು ಓಪನ್ ಸ್ಟ್ರೀಟ್ ಫೆಸ್ಟಿವಲ್‍ನ ಆಕರ್ಷಣೆಯಾಗಿತ್ತು.   

ಓಪನ್ ಸ್ಟ್ರೀಟ್ ಫೆಸ್ಟಿವಲ್ ಪ್ರಯುಕ್ತ ನಗರದ ರಾಜಾಸೀಟು ರಸ್ತೆ ಮಾರ್ಗದ ಉದ್ದಕ್ಕೂ 35 ಕ್ಕೂ ಹೆಚ್ಚು ಮಳಿಗೆ ನಿರ್ಮಿಸಲಾಗಿತ್ತು. ಸ್ಥಳದಲ್ಲೆ ವ್ಯಕ್ತಿಯ ಭಾವಚಿತ್ರ ಬಿಡಿಸಿಕೊಡುವ ಕಲಾವಿದರು, ಆಕರ್ಷಕ ಹಚ್ಚೆ ಹಾಕಿಸಿಕೊಳ್ಳುತ್ತಿದ್ದ ಯುವ ಸಮೂಹ, ‘ಫೇಸ್ ಪೈಂಟಿಂಗ್‍ಗೆ ಮುಖವೊಡ್ಡಿದ್ದ ಮಂದಿ, ಇದೆಲ್ಲವನ್ನು ಕುತೂಹಲಭರಿತರಾಗಿ ಕಡ್ಲೆಪುರಿ ತಿನ್ನುತ್ತಾ ನೋಡುತ್ತಿದ್ದ ಮಂದಿ, ವೈವಿಧ್ಯಮಯ ಹೂಗಿಡಗಳು, ತರಕಾರಿ ಬೀಜಗಳ ಖರೀದಿಯಲ್ಲಿ ತಲ್ಲೀನರಾಗಿದ್ದ ಮಂದಿ ಹೀಗೆ ಜಾತ್ರಾ ಮಹೋತ್ಸವದ ಕಿರು ಮಾದರಿಯಂತೆ ಸ್ಟ್ರೀಟ್ ಫೆಸ್ಟಿವಲ್ ಕಂಗೊಳಿಸಿತಲ್ಲದೇ, ಆಯೋಜಕರಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸಿತು.

ಮಕ್ಕಳ ಆಟದ ವಸ್ತುಗಳಿಂದ ಸೀರೆ, ಬಟ್ಟೆ, ಟೀ ಶರ್ಟ್ ಸೇರಿದಂತೆ ಹಲವು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಹಾಗೆಯೇ ದೋಸೆ, ಇಡ್ಲಿ, ತರಕಾರಿ ಫಲಾವ್, ರೈಸ್ ಬಾತ್, ಪಾನಿಪೂರಿ, ಮಸಾಲೆ ಪೂರಿ, ಐಸ್‍ಕ್ರೀಮ್ ಹೀಗೆ ನಾನಾ ರೀತಿಯ ತಿಂಡಿ ತಿನಿಸುಗಳ ಆಹಾರ ಮಳಿಗೆ ತೆರೆಯಲಾಗಿತ್ತು. ಜೊತೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಮಾರ್ಗದಲ್ಲಿ ಇಡಲಾಗಿದ್ದ ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. 

ಸಹಕಾರದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇದೇ ಪ್ರಥಮ ಬಾರಿಗೆ ಜರುಗಿದ ಕೊಡಗು ಪ್ರವಾಸಿ ಉತ್ಸವ ‘ದಸರಾ’ ನೆನಪಿಸುವಂತಿತ್ತು. ಮೂರು ದಿನಗಳ ಕಾಲ ಆಯೋಜಿಸಿದ್ದ ‘ಕೊಡಗು ಪ್ರವಾಸಿ ಉತ್ಸವ’ ವಿಭಿನ್ನ ಹಾಗೂ ವಿಶಿಷ್ಟವಾಗಿತ್ತು. 

ನಗರದ ಗಾಂಧಿ ಮೈದಾನದಲ್ಲಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಮಳಿಗೆ, ಪ್ರಾಚ್ಯವಸ್ತು ಮಾಹಿತಿಯ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ ಹಲವು ಮಳಿಗೆಗಳು ಗಮನ ಸೆಳೆದವು. ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಚೇತರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಏರ್ಪಡಿಸಲಾಗಿದ್ದ ಕೊಡಗು ಪ್ರವಾಸಿ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. 

ಪ್ರವಾಸೋದ್ಯಮಕ್ಕೆ ಉತ್ತೇಜನ

‘ಪ್ರಾಕೃತಿಕ ವಿಕೋಪದಿಂದ ನೆಲಕಚ್ಚಿದ್ದ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಿಜಕ್ಕೂ ಉತ್ತೇಜನವನ್ನು ನೀಡಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತದ ಪ್ರಯತ್ನ ನಿಜಕ್ಕೂ ಶ್ಲಾಘನೀಯ’ ಎಂದು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜನಾರ್ಧನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News