ಶಿವಮೊಗ್ಗದಲ್ಲಿ ಮತ್ತೆ ನಾಲ್ವರಲ್ಲಿ ಮಂಗನ ಕಾಯಿಲೆ ಲಕ್ಷಣ: ಆಸ್ಪತ್ರೆಗೆ ದಾಖಲು

Update: 2019-01-13 12:48 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜ.13: ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಸಮೀಪದ ಗ್ರಾಮಗಳಲ್ಲಿ ಶನಿವಾರ ಮತ್ತೆ ನಾಲ್ವರಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಿವೆ. ಎಲ್ಲ ರೋಗಿಗಳನ್ನು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಂಡವಳ್ಳಿ ಗ್ರಾಮದ ಲೋಲಾಕ್ಷಿ, ಸ್ಪೂರ್ತಿ, ಕಾಳಮಂಜಿಯ ಲಕ್ಷ್ಮ್ಮ, ಸಂಪ ಗ್ರಾಮದ ಶಾರದಮ್ಮ ಎಂಬವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಎಲ್ಲರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

ಚುರುಕು: ಸಾಗರ ತಾಲೂಕಿನ ಮಂಗನ ಕಾಯಿಲೆ ಪೀಡಿತ ಗ್ರಾಮಗಳಲ್ಲಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ವೇಗ ಪಡೆದುಕೊಂಡಿದೆ. ಭಾರಂಗಿ, ತಾಳಗುಪ್ಪ, ಆವಿನಹಳ್ಳಿ, ತುಮರಿ, ಹೊಳೆಬಾಗಿಲು, ಕಾಳಮಂಜಿ, ಮುಂಡಳ್ಳಿ, ಮರಬಿಡಿ ಭಾಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮಸ್ಥರಿಗೆ ಕೆಎಫ್‍ಡಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ನಡೆಸುತ್ತಿದ್ದಾರೆ. 

ಈಗಾಗಲೇ ನೂರಾರು ಜನರಿಗೆ ಕೆಎಫ್‍ಡಿ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಮತ್ತೊಂದೆಡೆ ದೊಡ್ಡ ಪ್ರಮಾಣದಲ್ಲಿ ಕೆಎಫ್‍ಡಿ ಕಾಣಿಸಿಕೊಂಡಿದ್ದ ಅರಲಗೋಡು ಗ್ರಾಮ ಪಂಚಾಯತ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಕೆಎಫ್‍ಡಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತಿವೆ. 

ವರದಿ: ಪುಣೆಯ ಪ್ರಯೋಗಾಲಯಕ್ಕೆ ರವಾನಿಸಿದ ಉಣುಗು (ಉಣ್ಣೆ) ಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೆಎಫ್‍ಡಿ ವೈರಸ್‍ಗಳಿರುವುದು ತಪಾಸಣೆಯಿಂದ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. ಈ ಕಾರಣದಿಂದ ಕೆಎಫ್‍ಡಿ ವೇಗವಾಗಿ ಹರಡುತ್ತಿದೆ. ಸದ್ಯ ಶಿವಮೊಗ್ಗ ನಗರದಲ್ಲಿಯೂ ವೈರಸ್ ಪತ್ತೆ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಇದರಿಂದ ಶಂಕಿತರ ರಕ್ತದ ಮಾದರಿ ಪರೀಕ್ಷಾ ವರದಿಯನ್ನು ತ್ವರಿತಗತಿಯಲ್ಲಿ ಪಡೆಯಲು ಸಹಾಯಕವಾಗಿದೆ. 

ಭಯ: ಸಾಗರ ತಾಲೂಕಿನ ಅರಲಗೋಡು ಸುತ್ತಮುತ್ತಲಿನ ಕೆಲ ಗ್ರಾಮಗಳ ಗ್ರಾಮಸ್ಥರು, ಕೆಎಫ್‍ಡಿ ಹಾವಳಿಗೆ ಭಯಭೀತರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳಲ್ಲಿ ಮಂಗನ ಕಾಯಿಲೆಯಿರುವುದು ದೃಢಪಟ್ಟಿದೆ. ಮತ್ತೊಂದೆಡೆ ಅರಲಗೋಡು, ಮಂಡವಳ್ಳಿ ಕೆಲ ಗ್ರಾಮಗಳಲ್ಲಿ ಶಾಲೆಗಳಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕೆಲ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News