ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದಾರೆ: ಸಚಿವ ಡಿ.ಕೆ.ಶಿವಕುಮಾರ್ ಹೊಸಬಾಂಬ್

Update: 2019-01-13 13:36 GMT

ಬೆಂಗಳೂರು, ಜ. 13: ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದು, ಅವರು ಯಾವ ಪಕ್ಷದವರು ಎಂಬುದನ್ನು ನಾನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೊಸಬಾಂಬ್ ಸಿಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಶಾಸಕರ ಹೆಸರನ್ನು ಹೇಳಿದರೆ ಮಾಧ್ಯಮಗಳಲ್ಲಿ ಸುದ್ಧಿ ಬಿತ್ತರ ಮಾಡುತ್ತೀರಿ. ಇದರಿಂದ ಶಾಸಕರಿಗೆ ತೊಂದರೆಯಾಗುತ್ತದೆ. ಮುಂಬೈಗೆ ಯಾರನ್ನು ಭೇಟಿಯಾಗಲು ಹೋಗಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ, ಅವರೆಲ್ಲ ಯಾವ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆಂಬುದು ಗೊತ್ತಿದೆ ಎಂದು ಹೇಳಿದರು.

ಬಿಜೆಪಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಸಿದ್ದ. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಶಾಸಕ ಬಿ.ಸಿ.ಪಾಟೀಲ್ ತಮ್ಮ ಪುತ್ರಿ ವಿವಾಹದ ಓಡಾಟದಲ್ಲಿದ್ದಾರೆ. ಅವರಿಗೆ ಮುಂದೆ ಸೂಕ್ತ ಸ್ಥಾನ ದೊರೆಯಲಿದೆ. ಉಳಿದೆಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದಾರೆ ಎಂದು ಹೇಳಿದರು.

ಗೊಂದಲ ಸೃಷ್ಟಿ: ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯವರು ಗೊಂದಲ ಸೃಷ್ಟಿಸಿ, ಅಸ್ಥಿರತೆ ಮೂಡಿಸುತ್ತಿದ್ದಾರೆ. ಸರಕಾರ ಉರುಳಿಸಲು ಮುಹೂರ್ತ ನಿಗದಿ ಮಾಡಿದ್ದೇವೆ, ಜೈಲಿಗೆ ಕಳುಹಿಸುತ್ತೇವೆ ಎಂದೆಲ್ಲ ಹೇಳುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

ಶಾಸಕರಿಗೆ ಆಮಿಷವೊಡ್ಡಿರುವ ಬಗ್ಗೆ ಎಸಿಬಿ, ಐಟಿಗೆ ದೂರು ನೀಡಿದ್ದಾರೆ. ಆದರೆ, ತನಿಖೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಿಗೆ ಎಷ್ಟು ಹಣದ ಆಮಿಷವೊಡ್ಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಿಎಂ ಕುಮಾರಸ್ವಾಮಿ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಧಾನಿ ಮೋದಿ ‘ಕ್ಲರ್ಕ್’ ಎಂದು ಹೇಳಿಕೆ ನೀಡಿದ್ದು, ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ನಾನು ಏನೂ ಹೇಳುವುದಿಲ್ಲ ಎಂದು ಶಿವಕುಮಾರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News