ದಿಕ್ಕೆಟ್ಟ ವಿಪಕ್ಷಗಳು ವೈರಿಗಳೊಂದಿಗೂ ಮೈತ್ರಿ ಮಾಡಿಕೊಳ್ಳುತ್ತಿವೆ: ನರೇಂದ್ರ ಮೋದಿ

Update: 2019-01-13 14:33 GMT

ಹೊಸದಿಲ್ಲಿ, ಜ.13: ವಿಪಕ್ಷಗಳನ್ನು ‘ದಿಕ್ಕೆಟ್ಟಿರುವ ಗುಂಪು’ ಎಂದು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಯಶಸ್ಸಿನಿಂದ ಭಯಗೊಂಡಿರುವ ವಿಪಕ್ಷಗಳು ಈ ಹಿಂದೆ ವೈರಿಗಳಾಗಿದ್ದ ಪಕ್ಷದೊಂದಿಗೂ ಅವಕಾಶವಾದಿ ಮೈತ್ರಿಕೂಟ ರಚನೆಗೆ ಮುಂದಾಗಿವೆ ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಬೂತ್‌ಮಟ್ಟದ ಕಾರ್ಯಕರ್ತರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಬಿಜೆಪಿಯ ಯಶಸ್ಸನ್ನು ಕಂಡು ಕೆಲವರು ಕೋಪಗೊಂಡಿದ್ದಾರೆ. ಆದ್ದರಿಂದ ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದ್ದಾರೆ ಎಂದರು. ಅವಕಾಶವಾದಿ ಮೈತ್ರಿಕೂಟ ಮತ್ತು ವಂಶಪರಂಪರೆಯ ಪಕ್ಷಗಳು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಲು ಬಯಸುತ್ತಿವೆ. ಬಿಜೆಪಿಯ ಯಶಸ್ಸನ್ನು ಕಂಡು ಕ್ರೋಧಗೊಂಡಿರುವ ಕೆಲವರು ಈಗ ಮೋದಿಯನ್ನು ತೆಗಳುವುದು ಮತ್ತು ನಕಾರಾತ್ಮಕ ರಾಜಕೀಯ ನಡೆಸುತ್ತಿದ್ದಾರೆ. ಮೋದಿ ಕೆಟ್ಟ ವ್ಯಕ್ತಿ, ಸರಕಾರ ಕೆಲಸ ಮಾಡುತ್ತಿಲ್ಲ, ಜನತೆ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಚಾರ ಮಾಡುವ ವಿಪಕ್ಷಗಳು ಮೈತ್ರಿ ರಚನೆಗೆ ಯಾಕೆ ಮುಂದಾಗಿವೆ . ನಿಮ್ಮ ಬಗ್ಗೆ ಆತ್ಮವಿಶ್ವಾಸವಿದ್ದರೆ ಈ ಹಿಂದೆ ವೈರಿಗಳಾಗಿದ್ದವರ ಜೊತೆಯೂ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಬರುತ್ತಿತ್ತೇ ಎಂದು ಪ್ರಶ್ನಿಸಿದರು.

ಪ್ರಥಮ ಬಾರಿ ಮತ ಚಲಾಯಿಸುವ ಯುವಜನರನ್ನು ತಲುಪಲು ಹೆಚ್ಚಿನ ಆದ್ಯತೆ ನೀಡುವಂತೆ ಬೂತ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ ಮೋದಿ, ಪ್ರಥಮ ಬಾರಿ ಮತ ಚಲಾಯಿಸುವವರಿಗೆ ವಂಶಪರಂಪರೆಯ ರಾಜಕೀಯದ ಬಗ್ಗೆ ಆಸಕ್ತಿ ಇರುವುದಿಲ್ಲ. ಅವರು ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರಿಗೆ ಭರವಸೆಯಲ್ಲಿ ಆಸಕ್ತಿ ಇಲ್ಲ, ಸಾಧನೆಯಲ್ಲಿ ಆಸಕ್ತಿ ಇದೆ. ನಾಟಕದಲ್ಲಿ ಆಸಕ್ತಿಯಿಲ್ಲ, ಕಾರ್ಯನಿರ್ವಹಣೆಯಲ್ಲಿ ಆಸಕ್ತಿ ಇದೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News