ಮೈತ್ರಿ ಸರಕಾರ ಉರುಳಿಸಲು ಬಿಡುವುದಿಲ್ಲ: ಹೆಚ್.ಡಿ.ದೇವೇಗೌಡ

Update: 2019-01-13 14:21 GMT

ಹಾಸನ,ಜ.13: ಯಾವುದೇ ಕಾರಣಕ್ಕೂ ಮೈತ್ರಿ ಸರಕಾರವನ್ನು ಉರುಳಿಸಲು ನಾನು ಬಿಡುವುದಿಲ್ಲ. ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಯಾರೆಂದು ಮುಂದೆ ನಡೆಯುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಹಿರಂಗಪಡಿಸುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.

ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರೆಯಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸರಕಾರಕ್ಕೆ ತೊಂದರೆಯಾಗಲು ನಾನು ಬಿಡುವುದಿಲ್ಲ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಎರಡು ದಿನ ಚರ್ಚೆ ಮಾಡಿದ್ದು, ಸಮ್ಮಿಶ್ರ ಸರಕಾರವನ್ನು ಯಾವ ಕಾರಣಕ್ಕೂ ಉರುಳಿಸಲು ಬಿಡಲ್ಲ ಎಂದು ಅಭಯ ನೀಡಿದರು.

ಮಹಿಳೆಯರ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆ ಎಂದು ನರೇಂದ್ರ ಮೋದಿ ಭಾಷಣ ಮಾಡುತ್ತಾರೆ. ಆದರೆ ಎಲ್ಲಿ ಮಹಿಳೆಯರ ಅಭಿವೃದ್ಧಿ ಆಗಿದೆ? ಭಾಷಣ ಮಾಡಲು ನಮಗೂ ಬರುತ್ತದೆ ಎಂದು ಮೋದಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು ನಮ್ಮ ಪಕ್ಷವನ್ನು ಬಿ ಟೀಮ್ ಎಂದು ಅಪಪ್ರಚಾರ ಮಾಡಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಅದನ್ನು ಯಾರು ಉಳಿಸುತ್ತಾರೆ ಎಂಬುದು ಜನತೆಗೆ ಬಿಟ್ಟ ವಿಚಾರ ಎಂದರು. 

ನನ್ನನ್ನು 56 ವರ್ಷಗಳ ಕಾಲ ಹಾಸನ ಜಿಲ್ಲೆಯಲ್ಲಿ ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ. ನಾನು ಯಾವುದೇ ಸಮುದಾಯಕ್ಕೆ ಅನ್ಯಾಯವನ್ನು ಇದುವರೆಗೂ ಮಾಡಿಲ್ಲ. ನಾನು ಯಾರ ಮನಸ್ಸನ್ನೂ ನೋಯಿಸಿಲ್ಲ. ಪಕ್ಷ ನನ್ನ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿದ ಪಕ್ಷ ಎಂದರು. 38 ಮಂದಿಯನ್ನು ಕಟ್ಟಿಕೊಂಡು ಸಿಎಂ ಆಗಿರುವ ನನ್ನ ಮಗ ಕುಮಾರಸ್ವಾಮಿಯ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್‍ನ 78 ಜನರನ್ನು ಕಟ್ಟಿಕೊಂಡು ಸರಕಾರ ನಡೆಸಬೇಕಲ್ಲ. ಮೈತ್ರಿ ಸರಕಾರದಲ್ಲಿ ಪಕ್ಷವೂ ಉಳಿಯಬೇಕಲ್ಲಾ ಎಂದ ಅವರು ಹೇಳಿದರು.

ಬೆಂಗಳೂರಿನಲ್ಲಿ ಜನವರಿ 17 ರಂದು ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ನಡೆಯಲಿದೆ. ಇದೇ ತಿಂಗಳ 29-30 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜನವರಿ 30 ರಂದು ಪಕ್ಷದ ಕಾರ್ಯಕರ್ತರ ಸಮಾವೇಶದ ಮಾಡುವ ಬಗ್ಗೆ ಚಿಂತನೆ ಮಾಡಿದ್ದೇನೆ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗದೇ ನೋವು ಉಂಟಾಗಿರುವುದು ನನಗೆ ತಿಳಿದಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ ಆಗಿದೆ. ಉಳಿದ ಸಾಲಮನ್ನಾ ಕೂಡ ಶೀಘ್ರ ಆಗಲಿದೆ ಎಂದು ಭರವಸೆ ನುಡಿದರು.  ಆನೆ ಇರುವ ಜಾಗದಲ್ಲಿನ ಮಕ್ಕಳಿಗಾಗಿ ಎರಡು ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಆ ಭಾಗದವರಿಗೆ ಅನುಕೂಲವಾಗಲಿದೆ. ಹಾಸನ-ಬೇಲೂರು ರೈಲು ಮಾರ್ಗ ಆಗಲಿದ್ದು, ರಸ್ತೆ ಕಾಮಗಾರಿ ಕೂಡ ಆಗಲಿದೆ. ಈಗಾಗಲೇ ಚನ್ನಪಟ್ಟಣ ಮಾರ್ಗ ಕಾಮಗಾರಿ ನಡೆಯುತ್ತಿದೆ. ಹಾಸನ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಈಗ ನಮ್ಮ ಜೊತೆ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಸಿದ್ದಾಂತದ ತಳಹದಿಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಅಧಿಕಾರ ನಡೆಸುತ್ತಿದೆ. ಆಡಳಿತಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಿದೆ ಎಂದರು. ಅಭಿವೃದ್ಧಿ ವಿಚಾರ ಬಂದರೆ ಹೆಚ್.ಡಿ. ರೇವಣ್ಣನವರು ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳದೇ ರಾಜ್ಯದ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಲಿಂಗೇಶ್, ಸಿ.ಎನ್. ಬಾಲಕೃಷ್ಣ, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ, ಜೆಡಿಎಸ್ ಮುಖಂಡ ತೋ.ಚ. ಅನಂತಸುಬ್ಬರಾಯ್ ಮಾತನಾಡಿದರು.

ಸಭೆಯಲ್ಲಿ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ಇಬ್ಬರೂ ಕಾರ್ಯಕರ್ತರ ಜೊತೆ ಕುಳಿತು ಗಮನ ಸೆಳೆದರು. ಸಭೆಗೂ ಮೊದಲು, ಅಗಲಿದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್‍ಗೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸಮಾರಂಭದಲ್ಲಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮುಖಂಡ ಮಳಲಿ ದೊಡ್ಡೆಗೌಡ, ಬಿ.ಎ. ಜಗನ್ನಾಥ್, ಜಾವಗಲ್ ರಾಜಶೇಖರ್, ಜಿ.ಓ. ಮಹಾಂತಪ್ಪ, ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಕಾರ್ಯಾಧ್ಯಕ್ಷ ಚನ್ನವೀರಪ್ಪ, ಸ್ವರೂಪ್, ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಅಕ್ಬರ್, ಜಿಪಂ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News