ಸಿಕ್ಕಿಂ: ಒಂದು ಕುಟುಂಬ, ಒಂದು ಉದ್ಯೋಗ ಯೋಜನೆ ಜಾರಿ

Update: 2019-01-13 14:25 GMT

ಗ್ಯಾಂಗ್ಟಕ್, ಜ.13: ರಾಜ್ಯದ ಎಲ್ಲಾ ಕುಟುಂಬಗಳಿಗೂ ಸರಕಾರಿ ಉದ್ಯೋಗದ ಸೌಲಭ್ಯ ಒದಗಿಸುವ ‘ಒಂದು ಕುಟುಂಬ, ಒಂದು ಉದ್ಯೋಗ’ ಯೋಜನೆಗೆ ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಚಾಲನೆ ನೀಡಿದ್ದಾರೆ. ಕಳೆದ ವರ್ಷ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಈ ಯೋಜನೆಯನ್ನು ಘೋಷಿಸಿದ್ದರು.

ಶನಿವಾರ ಗ್ಯಾಂಗ್ಟಕ್ ‌ನ ಪಲ್ಜೋರ್ ಮೈದಾನದಲ್ಲಿ ನಡೆದ ‘ಉದ್ಯೋಗ ಮೇಳ’ದಲ್ಲಿ 12 ಸಾವಿರಕ್ಕೂ ಹೆಚ್ಚಿನ ನಿರುದ್ಯೋಗಿಗಳಿಗೆ ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಹಸ್ತಾಂತರಿಸಿದರು. ಈಗ ಸರಕಾರಿ ಉದ್ಯೋಗ ಹೊಂದಿರದ ಕುಟುಂಬದ ಸದಸ್ಯರಿಗೆ ಮಾತ್ರ ನೇಮಕಾತಿ ಪತ್ರ ಹಸ್ತಾಂತರಿಸಲಾಗಿದೆ. ಉದ್ಯೋಗ ಒದಗಿಸುವ ಕಾರ್ಯವನ್ನು ಸಿಬ್ಬಂದಿ ಇಲಾಖೆಗೆ ವಹಿಸಲಾಗಿದೆ. ಸರಕಾರಿ ಉದ್ಯೋಗಿಗಳ ಸೌಲಭ್ಯದಿಂದ ವಂಚಿತರಿಗೆ ನೆರವಾಗುವ ಇಂತಹ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿರುವ ಪ್ರಪ್ರಥಮ ರಾಜ್ಯವಾಗಿ ಸಿಕ್ಕಿಂ ಗುರುತಿಸಿಕೊಂಡಿದೆ. ಈಗಾಗಲೇ ಸರಕಾರಿ ಸೇವೆಯಲ್ಲಿರುವ 25 ಸಾವಿರ ತಾತ್ಕಾಲಿಕ ನೌಕರರ ಸೇವೆಯನ್ನು ಜ್ಯೇಷ್ಠತೆಗೆ ಅನುಗುಣವಾಗಿ 2019ರ ಅಂತ್ಯದೊಳಗೆ ಹಂತಹಂತವಾಗಿ ಖಾಯಂಗೊಳಿಸಲಾಗುವುದು . ರಾಜ್ಯದ 6.4 ಲಕ್ಷ ಜನಸಂಖ್ಯೆಯಲ್ಲಿ 1 ಲಕ್ಷ ಖಾಯಂ ಸಿಬ್ಬಂದಿಗಳಿದ್ದಾರೆ. ತನ್ನ ಆದಾಯದ ಶೇ.70ರಷ್ಟನ್ನು ಸರಕಾರಿ ಉದ್ಯೋಗಿಗಳ ವೇತನಕ್ಕೆಂದು ನಿಗದಿಗೊಳಿಸಿರುವ ಮತ್ತು ಸರಕಾರಿ ಉದ್ಯೋಗಿಗಳಿಗೆ ಅಧಿಕ ವೇತನ ನೀಡುವ ಏಕೈಕ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News