ಶಿವಸೇನೆಯನ್ನು ಸೋಲಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ: ಅಮಿತ್ ಶಾ ಗೆ ಉದ್ಧವ್‌ಠಾಕ್ರೆ ತಿರುಗೇಟು

Update: 2019-01-13 14:56 GMT

ಮುಂಬೈ,ಜ.13: ಚುನಾವಣಾಪೂರ್ವ ಮೈತ್ರಿ ರೂಪುಗೊಳ್ಳದಿದ್ದರೆ ತನ್ನ ಪಕ್ಷವು ಮಾಜಿ ಮಿತ್ರಪಕ್ಷಗಳಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲಿದೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ರವಿವಾರ ತಿರುಗೇಟು ನೀಡಿರುವ ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಅವರು,ತನ್ನ ಪಕ್ಷವನ್ನು ಸೋಲಿಸಬಲ್ಲ ವ್ಯಕ್ತಿ ಇನ್ನೂ ಹುಟ್ಟಿಲ್ಲ ಎಂದು ಹೇಳಿದ್ದಾರೆ.

ಚುನಾವಣಾಪೂರ್ವ ಮೈತ್ರಿಯು ರೂಪುಗೊಂಡರೆ ತನ್ನ ಮಿತ್ರಪಕ್ಷಗಳು ಗೆಲ್ಲುವಂತೆ ಬಿಜೆಪಿಯು ನೋಡಿಕೊಳ್ಳುತ್ತದೆ,ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವುಗಳನ್ನು ಮಣ್ಣು ಮುಕ್ಕಿಸುತ್ತದೆ ಎಂದು ಶಾ ಇತ್ತೀಚಿಗೆ ಶಿವಸೇನೆಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು.

ಉಪನಗರ ವರ್ಲಿಯಲ್ಲಿ ಬಹಿರಂಗ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಠಾಕ್ರೆ,ಅಯೋಧ್ಯೆ ವಿವಾದವನ್ನು ತಮ್ಮ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳುವವರನ್ನು ಬಯಲಿಗೆಳೆಯಲೆಂದೇ ತನ್ನ ಪಕ್ಷವು ಚುನಾವಣೆಗಳಿಗೆ ಮುನ್ನ ರಾಮ ಮಂದಿರ ನಿರ್ಮಾಣ ವಿಷಯವನ್ನೆತ್ತಿದೆ ಎಂದು ಹೇಳಿದರು.

ಮಿತ್ರರಾದ ನಿತೀಶ್ ಕುಮಾರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ವಿರೋಧದ ನಡುವೆ ರಾಮ ಮಂದಿರವನ್ನು ಬಿಜೆಪಿ ಹೇಗೆ ನಿರ್ಮಿಸುತ್ತದೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವನ್ನೂ ಠಾಕ್ರೆ ಬಿಡಲಿಲ್ಲ. ಕಾಂಗ್ರೆಸ್‌ ನ ಕೃತ್ಯಗಳಿಗಾಗಿ 2014ರ ಚುನಾವಣೆಯಲ್ಲಿ ಜನರು ಅದಕ್ಕೆ ಸೂಕ್ತ ಸ್ಥಾನ ತೋರಿಸಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಪಡೆಯಲೂ ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News