ನಾಡಿನ ಸಾಂಸ್ಕೃತಿಕ ಕಲೆಗಳು ನೇಪಥ್ಯಕ್ಕೆ: ಶಾಸಕ ರಾಜೇಗೌಡ

Update: 2019-01-13 16:14 GMT

ಶೃಂಗೇರಿ, ಜ.13: ಜೀವನದ ಜಂಜಾಟದಲ್ಲಿ ನಮ್ಮ ಬದುಕಿನ ಶ್ರೇಷ್ಠತೆಯ ದ್ಯೋತಕವಾಗಬೇಕಿದ್ದ ಸಾಂಸ್ಕೃತಿಕ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಂಘಟನೆಗಳು ತರಬೇತಿ ಶಿಬಿರವನ್ನು ನಿರಂತರವಾಗಿ ಏರ್ಪಡಿಸಿ ಹೊಸತಲೆಮಾರಿನ ಕಲಾವಿದರನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದ್ದಾರೆ. 

ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಏರ್ಪಡಿಸಿದ್ದ ಮಲೆನಾಡು ಉತ್ಸವ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದ ಅವರು, ರಂಗಭೂಮಿ ಮತ್ತು ಸಂಗೀತ ಕ್ಷೇತ್ರ ಮಲೆನಾಡಿನಲ್ಲಿ ಗಟ್ಟಿ ಇತಿಹಾಸವನ್ನು ಹೊಂದಿದೆ. ಈ ಕಲೆಗಳನ್ನು ಉಳಿಸಿ ಬೆಳೆಸಬೇಕು. ಅದಕ್ಕಾಗಿ ಸ್ಥಳೀಯ ಕಲಾವಿದರನ್ನು ರೂಪಿಸುವ ಅವಶ್ಯಕತೆಯಿದೆ. ಮಲೆನಾಡು ಉತ್ಸವ ಒಂದು ದಶಕಕ್ಕೂ ಹೆಚ್ಚುಕಾಲ ಸ್ಥಳೀಯ ಮತ್ತು ನಾಡಿನ ಖ್ಯಾತ ಕಲಾವಿದರಿಗೆ ವೇದಿಕೆ ಒದಗಿಸುತ್ತಿರುವುದನ್ನು ಹತ್ತಿರದಿಂದ ಗಮನಿಸಿದ್ದೇನೆ. ಸಂಘಟಕ ರಮೇಶ್ ಬೇಗಾರ್ ಪ್ರತ್ಯೇಕ ಕಲಿಕಾ ಶಿಬಿರವನ್ನು ಏರ್ಪಡಿಸಿ ಅಲ್ಲಿ ಸಿದ್ಧಗೊಂಡ ಕಲಾವಿದರಿಗೆ ಈ ಉತ್ಸವದಲ್ಲಿ ವೇದಿಕೆ ಒದಗಿಸುವಂತೆ ಕಾರ್ಯಸೂಚಿಯನ್ನು ಹೊಂದಲಿ ಮತ್ತು ಅದಕ್ಕಾಗಿ ತನ್ನ ಸಹಕಾರವಿದೆ ಎಂದು ರಾಜೇಗೌಡ ತಿಳಿಸಿದರು.

ಈ ಸಂದರ್ಭ ಅವರು ಹಿರಿಯ ರಂಗನಟ ಬಿ.ಎಲ್ ರವಿಕುಮಾರ್ ಕುರಿತಾದ ಅಭಿನಂದನಾ ಗ್ರಂಥ "ರಂಗರವಿ" ಬಿಡುಗಡೆಗೊಳಿಸಿದರು. ಉತ್ಸವ ಸಂಚಾಲಕ ಎಸ್.ಎನ್ ವಿಶ್ವನಾಥ್ ಮಾತನಾಡಿ, ಎಲ್ಲಾ ಕಲೆಗಳ ಪ್ರದರ್ಶನಕ್ಕೆ ಈ ಉತ್ಸವವು ಆದ್ಯತೆಯನ್ನು ನೀಡಿರುತ್ತದೆ. ಅದರಲ್ಲೂ ಎರಡು ಪ್ರತ್ಯೇಕ ಶೈಲಿಯ ನಾಟಕದ ಮೂಲಕ ರಂಗಭೂಮಿಯ ವಿಸ್ತಾರವನ್ನು ತಿಳಿಯುವಲ್ಲಿ ಉತ್ಸವವು ಸಹಕಾರಿಯಾಗಿದೆ ಎಂದು ತಿಳಿಸಿದರು. 

ಗೌರವವನ್ನು ಸ್ವೀಕರಿಸಿ ಮಾತನಾಡಿದ ಪ್ರದೀಪ ಯಡದಾಳು, ಮಲೆನಾಡಿನ ಅಪರೂಪದ ಜಾನಪದ ಕಲೆ ಅಂಟಿಗೆ ಪಿಂಟಿಗೆ ಹೆಚ್ಚು ಜನರಿಗೆ ಪರಿಚಯವಾಗಬೇಕಾದ ಅಗತ್ಯವಿದ್ದು ಅದನ್ನು ಶಾಲೆಯಲ್ಲಿ ಪರಿಚಯಿಸುವ ಉದ್ದೇಶವನ್ನು ಹೊಂದಿರುವ ಭಾರತೀತೀರ್ಥ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಮತ್ತು ಜಾನಪದ ಕಲೆಯ ರಕ್ಷಣೆಗೆ ಈ ಸಂಸ್ಥೆ ನಡೆಸುವ ಕಾರ್ಯ ಯೋಜನೆಗಳಿಗೆ ತನ್ನ ಸಹಕಾರವಿದೆ ಎಂದು ತಿಳಿಸಿದರು. 

ಮತ್ತೋರ್ವ ಪ್ರಶಸ್ತಿ ಪುರಸ್ಕೃತ ಪಾರ್ಥಸಾರಥಿ ಮಾತನಾಡಿ, ವೃತ್ತಿ ರಂಗಭೂಮಿ ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿದ್ದು ಅದನ್ನು ಹಳೆಯ ವೈಭವದೊಂದಿಗೆ ಅಸ್ತಿತ್ವದಲ್ಲಿ ಉಳಿಸಿಕೊಂಡು ಹೋಗಬೇಕಿದೆ. ಈ ಹಿನ್ನಲೆಯಲ್ಲಿ ನಾವು ರಾಜ್ಯಾದ್ಯಂತ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದು, ಮಲೆನಾಡಿನ ಜನತೆಗೆ ಇದನ್ನು ಪರಿಚಯಿಸಲು ಹೆಮ್ಮೆ ಇದೆ ಎಂದು ತಿಳಿಸಿದರು.

ಉತ್ಸವ ಅಧ್ಯಕ್ಷ ಬಿ.ಎಲ್ ರವಿಕುಮಾರ್ ಮಾತನಾಡಿದರು. ಈ ಸಂದರ್ಭ ಮಲೆನಾಡಿನ ಜಾನಪದ ಮತ್ತು ರಂಗಕಲಾವಿದ ಪ್ರದೀಪ ಯಡದಾಳು ಇವರಿಗೆ ಮೆಣಸೆ ಶಂಕರ ಹೆಗಡೆ ಸ್ಮಾರಕ ರಂಗಪ್ರಶಸ್ತಿ, ಬೆಂಗಳೂರಿನ ವಸಂತಪುರದ ರಂಗ ಸಂಘಟಕ ಪಾರ್ಥಸಾರಥಿ ಅವರಿಗೆ ಎಲ್.ಜಿ ಶಿವಕುಮಾರ್ ಸ್ಮಾರಕ ಕಲಾಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಗತಿಪರ ಕೃಷಿಕ ಹೆಚ್ಗುಂದ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಮೇಶ್ ಪುದುವಾಳ್,  ಶೋಭಾ ಅನಂತಯ್ಯ, ಕುಮಾರ್ ಗೌರವ್, ಶಾರದಾ ಗೋಪಾಲ್ ಉಪಸ್ಥಿತರಿದ್ದರು.ಸಂಘಟಕ ರಮೇಶ್ ಬೇಗಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಮೋಡಿ ಮಾಡಿದ ನೃತ್ಯ ವೈಭವ: ಮಲೆನಾಡು ಉತ್ಸವದ ನಾಲ್ಕನೇ ದಿನ ಮಂಗಳೂರಿನ ಅರೇಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರಿಂದ ನೃತ್ಯ ವೈಭವ ಪ್ರಸ್ತುತಿಗೊಂಡಿತು. ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸಮ್ಮಿಳನದ ಮೂಲಕ ಕಿರು ನೃತ್ಯ ರೂಪಕಗಳನ್ನು ಪ್ರದರ್ಶಿಸಿದ ತಂಡ ಗಣೇಶನ ಕುರಿತಾದ ಫ್ಯೂಜನ್ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಿಸಿತು. ನಂತರ ಈಶ್ವರನ ಕ್ರೋಧ ಮತ್ತು ಸೌಮ್ಯಭಾವದ ಅನಾವರಣಗೈದ ಮಂಜುನಾಥ ಚರಿತೆ ನೃತ್ಯ ರೂಪಕ ಗಮನ ಸೆಳೆದರೆ ಮಹಿಷ ಮರ್ಧಿನಿ ರೂಪಕವು ಸಪ್ತಮಾತೃಕೆಯರ ಮೂಲಕ ಅಭಿವ್ಯಕ್ತಿಸಿದ ರೀತಿ ಪ್ರೇಕ್ಷಕರನ್ನು ಮೋಡಿ ಮಾಡಿತು. ಇದರಲ್ಲಿ ನೃತ್ಯದ ಹಲವು ಪ್ರಕಾರವನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗಿತ್ತು. ನೃತ್ಯ ಸಂಯೋಜನೆಯೊಂದಿಗೆ ಮುಖ್ಯ ಪಾತ್ರದಲ್ಲಿ ಶ್ವೇತ ಅರೆಹೊಳೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ಬೆಂಗಳೂರಿನ ಭವಾನಿ ಶಂಕರ ಕಲಾವೃಂದದಿಂದ ಪ್ರಚಂಡ ರಾವಣ ಎಂಬ ಮೈಸೂರು ಸೀಮೆಯ ವೃತ್ತಿ ನಾಟಕವು ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News