ಶಿವಮೊಗ್ಗ: ವರ್ಷವಾದರೂ ಆಗದ ರಸ್ತೆ ಡಾಂಬರೀಕರಣ; ಮೇಯರ್ ಗೆ ವಾರ್ಡ್ ನಿವಾಸಿಗಳಿಂದ ಘೇರಾವ್

Update: 2019-01-13 16:42 GMT

ಶಿವಮೊಗ್ಗ, ಜ. 13: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಭಾನುವಾರ ನಗರದ ಹೊರವಲಯ ವಾರ್ಡ್ ಸಂಖ್ಯೆ 6 ರ ಆಲ್ಕೋಳದ ನಿವಾಸಿಗಳು ಆಲ್ಕೋಳದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಾರ್ಡ್ ಕಾರ್ಪೋರೇಟರ್ ಕೂಡ ಆದ ಮೇಯರ್ ಲತಾ ಗಣೇಶ್‍ಗೆ ಆಕ್ರೋಶಭರಿತ ನಾಗರಿಕರು ಘೇರಾವ್ ಹಾಕಿ, ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಆಕ್ರೋಶಭರಿತ ನಿವಾಸಿಗಳನ್ನು ಸಮಾಧಾನ ಪಡಿಸಲು ಮೇಯರ್ ಹರಸಾಹಸ ನಡೆಸುವಂತಾಯಿತು. ಕಾಲಮಿತಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಕ್ರಮಕೈಗೊಳ್ಳುವುದಾಗಿ ಮೇಯರ್ ಭರವಸೆ ನೀಡಿದರು. ಅಂತಿಮವಾಗಿ ನಾಗರಿಕರು ಪ್ರತಿಭಟನೆ ಹಿಂದೆಗೆದುಕೊಂಡರು.

ತೊಂದರೆ: 100 ಅಡಿ ರಸ್ತೆಯಿಂದ ಆಲ್ಕೋಳದ ಮುಖ್ಯ ರಸ್ತೆ ಅಭಿವೃದ್ದಿಪಡಿಸಲು ಕಳೆದ ವರ್ಷ ನಿರ್ಧರಿಸಲಾಗಿತ್ತು. ಹಳೇಯ ಡಾಂಬರು ರಸ್ತೆ ಕಿತ್ತು ಹಾಕಲಾಗಿತ್ತು. ತದನಂತರ ಜಲ್ಲಿ ಹಾಕಿದ್ದರು. ಆದರೆ ಇಲ್ಲಿಯವರೆಗೂ ಡಾಂಬರ್ ಹಾಕಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಜಲ್ಲಿ ಕಲ್ಲು ಹಾಕಿರುವ ರಸ್ತೆಯಲ್ಲಿ ಜನ-ವಾಹನಗಳ ಓಡಾಟ ದುಸ್ತರವಾಗಿ ಪರಿಣಮಿಸಿದೆ. ಧೂಳಿನ ಪ್ರಮಾಣವೂ ಹೆಚ್ಚಿದೆ. ರಸ್ತೆ ಅವ್ಯಸ್ಥೆಯಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ನಾಗರಿಕರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಹಲವು ಬಾರಿ ಪಾಲಿಕೆ ಆಡಳಿತದ ಗಮನಕ್ಕೆ ತಂದರೂ ಇಲ್ಲಿಯವರೆಗೂ ರಸ್ತೆಗೆ ಡಾಂಬರ್ ಹಾಕುವ ಪ್ರಕ್ರಿಯೆ ಆರಂಭಿಸಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ವಾರ್ಡ್ ಕಾರ್ಪೋರೇಟರ್ ಲತಾ ಗಣೇಶ್‍ರವರೇ ಮೇಯರ್ ಆಗಿದ್ದರೂ ರಸ್ತೆಯ ದುಃಸ್ಥಿತಿ ಸರಿಪಡಿಸಲು ಮುಂದಾಗದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಹಾಗೆಯೇ ನಂದಿನಿ ಬಡಾವಣೆಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಅವ್ಯವಸ್ಥಿತ ಚರಂಡಿಯಿಂದ ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿದೆ. ಕೆಲವರು ರಸ್ತೆಯ ಮೇಲೆಯೇ ಶೌಚಾಲಯ ಕಟ್ಟಿಕೊಂಡಿದ್ದಾರೆ ಎಂದು ಇದೇ ವೇಳೆ ನಿವಾಸಿಗಳು ದೂರಿದ್ದಾರೆ. ಪ್ರತಿಭಟನೆಯಲ್ಲಿ ಯುವ ಮುಖಂಡ ರಮೇಶ್‍ನಾಯ್ಕ್, ಬಸವರಾಜ್, ದಿನೇಶ್, ಬಾಬು ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News