ಶಿಕ್ಷಕ ಹೊಡೆಯುವ ವೇಳೆ ಆಯತಪ್ಪಿ ಬಿದ್ದು ವಿದ್ಯಾರ್ಥಿಯ ಭುಜದ ಮೂಳೆ ಮುರಿತ: ಎಫ್‍ಐಆರ್ ದಾಖಲು

Update: 2019-01-13 16:59 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜ.13: ಶಿಕ್ಷಕ ಹೊಡೆಯುವ ವೇಳೆ ಆಯತಪ್ಪಿ ಬೆಂಚ್ ಮೇಲೆ ಬಿದ್ದು, ವಿದ್ಯಾರ್ಥಿಯೋರ್ವ ಭುಜದ ಮೂಳೆ ಮುರಿದುಕೊಂಡಿರುವ ಘಟನೆ ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

7 ನೇ ತರಗತಿ ಅಭ್ಯಾಸ ಮಾಡುತ್ತಿರುವ ಗೌತಮ್ ಎಂಬ ವಿದ್ಯಾರ್ಥಿಯೇ ಭುಜದ ಮೂಳೆ ಮುರಿತಕ್ಕೊಳಗಾದ ಬಾಲಕ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಶನಿವಾರ ಪೋಷಕರು ಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ: ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವ ವೇಳೆ ವಿದ್ಯಾರ್ಥಿಯು ತನ್ನ ನೋಟ್ಸ್ ನಲ್ಲಿಯೇ ಮುಖ್ಯ ಅಂಶಗಳನ್ನು ಬರೆದುಕೊಳ್ಳುತ್ತಿದ್ದ. ಇದರಿಂದ ಆಕ್ರೋಶಗೊಂಡ ಶಿಕ್ಷಕ ಪರಮೇಶ್ವರಪ್ಪರವರು ಕೈಯಿಂದ ವಿದ್ಯಾರ್ಥಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕ ನಿಯಂತ್ರಣ ಕಳೆದುಕೊಂಡು ಎದುರಿನ ಬೆಂಚ್ ಮೇಲೆ ಬಿದ್ದಿದ್ದು, ಇದರಿಂದ ಎಡ ಭುಜದ ಮೂಳೆಗೆ ಹಾನಿಯಾಗಿದೆ.

ಬಳಿಕ ಶಿಕ್ಷಕ ಪರಮೇಶ್ವರಪ್ಪರವರೇ ಬಾಲಕನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಔಷಧಿ ಕೊಡಿಸಿದ್ದಾರೆ. ಆದಾಗ್ಯೂ ಬಾಲಕನ ಕೈ ನೋವು ಕಡಿಮೆಯಾಗಿರಲಿಲ್ಲ. ಮನೆಗೆ ಆಗಮಿಸಿದ ಬಾಲಕ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದ. ಪೋಷಕರು ಬಾಲಕನನ್ನು ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಎಕ್ಸರೇ ತೆಗೆಸಿದಾಗ ಭುಜದ ಮೂಳೆ ಮುರಿದಿರುವುದು ಬೆಳಕಿಗೆ ಬಂದಿತ್ತು. 

ಮತ್ತೊಂದು ಘಟನೆ: ಇತ್ತೀಚೆಗಷ್ಟೆ ಇದೇ ಶಾಲೆಯಲ್ಲಿ ಶಿಕ್ಷಕಿಯೋರ್ವರು ವಿದ್ಯಾರ್ಥಿಯೋರ್ವನಿಗೆ ಹೊಡೆದಿದ್ದ ಪ್ರಕರಣ ದೊಡ್ಡ ರಾದ್ದಾಂತವಾಗಿತ್ತು. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿಕ್ಷಕಿಯ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿತ್ತು. ಪೋಷಕರ ವಿರುದ್ಧ ಸರ್ಕಾರಿ ನೌಕರರ ಸಂಘವು ಪ್ರತಿಭಟನೆ ಕೂಡ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News