ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮತ್ತೆ ಬಿಜೆಪಿ ಪಾಲು

Update: 2019-01-13 17:51 GMT

ಮಡಿಕೇರಿ, ಜ.13 : ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಗೆಲವು ಸಾಧಿಸವ ಮೂಲಕ ಮರಳಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಹಾಲಿ ಅಧ್ಯಕ್ಷ ಬಿ.ಕೆ. ಜಗದೀಶ್ ಹಾಗೂ ಉಪಾಧ್ಯಕ್ಷ ಎಸ್.ಸಿ.ಸತೀಶ್ ಸಹಿತ ಇತರ 6 ಮಂದಿ ಜಯಗಳಿಸಿದ್ದು, ಇತರ ಸಾಮಾನ್ಯ ವರ್ಗದ 3 ಸ್ಥಾನಗಳೊಂದಿಗೆ 2 ಮಹಿಳಾ ಸ್ಥಾನಗಳನ್ನು ಮೈತ್ರಿ ಬಣ ತನ್ನದಾಗಿಸಿಕೊಂಡಿದೆ.

ಸಾಮಾನ್ಯ ವರ್ಗದ 7 ಸ್ಥಾನಗಳಿಗೆ 19 ಮಂದಿ ಸ್ಪರ್ಧೆಯಲ್ಲಿದ್ದು, ಈ ಪೈಕಿ ಅತ್ಯಧಿಕ ಮತಗಳಿಂದ ಅಧ್ಯಕ್ಷ ಬಿ.ಕೆ. ಜಗದೀಶ್ (659) ಗೆಲವು ಸಾಧಿಸಿದರೆ, ಮೈತ್ರಿ ಬಣದಿಂದ ಬಿ.ಎಂ. ರಾಜೇಶ್ ಯಲ್ಲಪ್ಪ (518). ಕೋಡಿ ಚಂದ್ರಶೇಖರ್ (496), ಜಿ.ಎಂ. ಸತೀಶ್ ಪೈ (474) ಮತಗಳಿಂದ ಗೆಲುವಿನ ನಗು ಬೀರಿದರು. ಉಳಿದಂತೆ ಬಿಜೆಪಿ ಬೆಂಬಲಿತ ಕನ್ನಂಡ ಸಂಪತ್ (543), ಗಿರೀಶ್ ಆರಾಧಾನಾ (377) ಮತಗಳನ್ನು ಪಡೆದು ಕ್ರಮವಾಗಿ ಜಯ ಸಾಧಿಸಿದರು.

ಎರಡು ಮಹಿಳಾ ಮೀಸಲು ಸ್ಥಾನಗಳಿಗೆ ನಡೆದ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತ ಭಾರತಿ ರಮೇಶ್ ಹಾಗೂ ಐ.ಜಿ. ಶಿವಕುಮಾರಿ ಪರಾಜಯಗೊಂಡು ಮೈತ್ರಿ ಬಣದ ಕಾವೇರಮ್ಮ ಸೋಮಣ್ಣ (417) ಹಾಗೂ ಈಶ್ವರಿ ಮಾಚಯ್ಯ (521) ಮತಗಳಿಂದ ಅಚ್ಚರಿಯ ಜಯ ಸಾಧಿಸಿದರು. ಪ್ರತಿ ಸ್ಪರ್ಧಿ ಭಾರತಿ ರಮೇಶ್ (396) ಸೋಲು ಅನುಭವಿಸಿದರು. ಕಾವೇರಮ್ಮ ಸೋಮಣ್ಣ ಅವರಿಗೆ ಕೊನೆ ಕ್ಷಣದವರೆಗೂ ಪೈಪೋಟಿ ನೀಡಿದ ಶಿವಕುಮಾರಿ ಕೇವಲ 4 ಮತಗಳ ಅಂತರದಿಂದ ಪರಾಜಿತರಾದರು. ಅವರು ಮರು ಮತಗಳ ಎಣಿಕೆಗೆ ಪಟ್ಟು ಹಿಡಿದ ಪ್ರಸಂಗವೂ ಎದುರಾಯಿತು.

ಹಾಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿರುವ ಪರಿಶಿಷ್ಟ ಜನಾಂಗದ ಮೀಸಲು ಅಭ್ಯರ್ಥಿ ಎಸ್.ಸಿ.ಸತೀಶ್ (652) ಮೊದಲನೆಯ ಗೆಲವು ದಾಖಲಿಸಿದರೆ, ಪ್ರತಿಸ್ಪರ್ದಿ ಹೆಚ್.ಎಸ್. ಪ್ರೇಮ್ ಕುಮಾರ್ (284) ಮತಗಳಿಂದ ಪರಾಜಯಗೊಂಡರು. 

ಹಾಗೆಯೇ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ನಡೆದ ನೇರ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಕೆ.ಆರ್.ನಾಗೇಶ್ (509) ಮತಗಳಿಂದ ಗೆಲವು ದಾಖಲಿಸಿದರೆ, ಪ್ರತಿಸ್ಪರ್ಧಿ ಮೈತ್ರಿ ಬಣ ಎಂ.ಎಂ.ಧರ್ಮಾವತಿ (421) ಮತಗಳಿಸಿ ಸೋಲೊಪ್ಪಿಕೊಂಡರು. ಇನ್ನು ಹಿಂದುಳಿದ ವರ್ಗದ ಒಂದು ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿ ಬೆಂಬಲಿತ ಸಿ.ಕೆ.ಬಾಲಕೃಷ್ಣ (607) ಹಾಗೂ ಬಿ.ವಿ.ಕಿರಣ್ (421) ಹಾಗೂ ಉಮೇಶ್ (193) ಮತಗಳಿಸಿ ಪರಾಜಯಗೊಂಡರು.

ಒಟ್ಟು 1112 ಮಂದಿ ಮತದಾರರ ಪೈಕಿ (996) ಮಂದಿ ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಆ ಪ್ರಕಾರ ಶೇ. 89.65 ರಷ್ಟು ಮತದಾನ ನಡೆದಿರುವುದು ಕಂಡು ಬಂತು. ಸಂಜೆ ನಾಲ್ಕು ಗಂಟೆಯ ಬಳಿಕ ಪೊಲೀಸ್ ಭದ್ರತೆಯಲ್ಲಿ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. 

ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಈ  ಬಾರಿ ತೀವ್ರ ಪೈಪೋಟಿಯೊಂದಿಗೆ 32 ಮಂದಿ ಸ್ಪರ್ಧೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News