ಕೆ.ಆರ್.ಪೇಟೆ: ಬಾಗಿಲು ಮುರಿದು ಮನೆಗೆ ನುಗ್ಗಲು ಯತ್ನ; ಮಾಲಕನ ಕಂಡು ಪರಾರಿಯಾದ ಕಳ್ಳರು

Update: 2019-01-13 18:07 GMT

ಕೆ.ಆರ್.ಪೇಟೆ,ಜ.13: ಮನೆ ಬಾಗಿಲು ಮುರಿದು ಒಳನುಗ್ಗಲು ಪ್ರಯತ್ನಿಸುತ್ತಿದ್ದ ದುಷ್ಕರ್ಮಿಗಳ ತಂಡ ಮಾಲಕರ ಆಗಮನದಿಂದ ವಿಚಲಿತರಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವುದಾಗಿ ಭೀತಿ ಹುಟ್ಟಿಸಿ ಕಾರಿನಲ್ಲಿ ಪರಾರಿಯಾಗಿರುವ ಘಟನೆ ಶನಿವಾರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಡೆದಿದೆ.

ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ಡಾ.ಪಿ.ಎನ್.ಎನ್.ಗುಪ್ತ ಎಂಬುವವರ ಮನೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಡಾ.ಪಿ.ಎನ್.ಎನ್.ಗುಪ್ತ ಮತ್ತು ಅವರ ಪುತ್ರ ಡಾ.ಭದ್ರಿನಾಥ್ ಅವರು ಪಟ್ಟಣದ ಬಸ್ ನಿಲ್ದಾಣದ ಎದುರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಪ್ರತಿ ಸಂಜೆ 7 ಗಂಟೆಗೆ ಮನೆಗೆ ಬರುವುದು ವಾಡಿಕೆ. ಆದರೆ ಶನಿವಾರ ಡಾ.ಭದ್ರಿನಾಥ್ ಮೈಸೂರಿಗೆ ಹೋಗಬೇಕಾಗಿದ್ದ ಕಾರಣ ಒಂದು ಗಂಟೆ ಮುಂಚಿತವಾಗಿ ಮನೆಗೆ ಬಂದಾಗ ನಾಲ್ಕೈದು ಮಂದಿ ಇದ್ದ ಕಳ್ಳರ ತಂಡ ಮನೆಯ ಬಾಗಿಲು ಮುರಿದು ಒಳ ನುಗ್ಗಲು ಪ್ರಯತ್ನಿಸುತ್ತಿತ್ತು. ಈ ವೇಳೆ ಪ್ರತಿರೋಧ ವ್ಯಕ್ತಪಡಿಸುತ್ತಾ ಮನೆಗೆ ಕಡೆಗೆ ಬರುತ್ತಿದ್ದ ಡಾ.ಭದ್ರಿನಾಥ್ ಅವರತ್ತ ಚಾಕು, ಮಚ್ಚು ಮತ್ತಿತರ ಮಾರಕಾಸ್ತ್ರಗಳನ್ನು ತೋರಿಸಿ ಕಿರುಚಿದರೆ ಅಥವಾ ಹಿಡಿಯಲು ಪ್ರಯತ್ನಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಹತ್ತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಈ ವೇಳೆ ಡಾ.ಭದ್ರಿನಾಥ್ ಅವರು ಕೂಗಿಕೊಂಡಾಗ ಸಾರ್ವಜನಿಕರು ಸೇರಿದ್ದು, ಆದರೆ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ನೇತೃತ್ವದ ತಂಡ ಸುಮಾರು 18 ಕಿ.ಮೀವರೆಗೆ ಬೆನ್ನತ್ತಿ ಹೋದರೂ ಸಹ ಹರಪನಹಳ್ಳಿ ಕ್ರಾಸ್ ಬಳಿ ದಿಕ್ಕು ತಪ್ಪಿಸಿ ಪರಾರಿಯಾಗಿದ್ದಾರೆ. 

ಕಾರಿನ ನಂಬರ್ ಪತ್ತೆಯಾಗಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ವ್ಯಕ್ತಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News