ದಾವಣಗೆರೆ: ನೀರು ಸಿಗುವವರೆಗೂ ಕೊಳವೆ ಬಾವಿ ಕೊರೆಯಲು ಸಚಿವ ಸಂಪುಟ ಉಪ ಸಮಿತಿ ಸೂಚನೆ

Update: 2019-01-13 18:17 GMT

ದಾವಣಗೆರೆ,ಜ.13: ಕುಡಿಯುವ ನೀರಿನ ಸಮಸ್ಯೆಗಳಿರುವ ಪ್ರದೇಶಗಳಲ್ಲಿ ನೀರು ಸಿಗುವವರೆಗೂ ಕೊಳವೆ ಬಾವಿ ಕೊರೆಯಲು ಭಾನುವಾರ ಸಚಿವ ಸಂಪುಟ ಉಪ ಸಮಿತಿ ಸಭೆ ಜಿಲ್ಲಾಡಳಿತ, ಜಿಪಂಗಳಿಗೆ ಸೂಚಿಸಿದೆ. 

ನಗರದ ಜಿಪಂ ಸಭಾಂಗಣದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಅಧ್ಯಕ್ಷತೆಯ ನಾಲ್ವರು ಸಚಿವರನ್ನು ಒಳಗೊಂಡ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯರು, ಭೂಮಿಯಲ್ಲಿ ನೀರು ಸಿಗುವವರೆಗೂ ಕೊಳವೆ ಬಾವಿ ಕೊರೆಸಿ, ಜನರಿಗೆ ನೀರು ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.  

ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇರುವಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ತಪ್ಪಿಸಲು ಆಯಾ ಗ್ರಾಮಗಳಲ್ಲೇ ಕೊಳವೆ ಬಾವಿಗಳನ್ನು ಕೊರೆಸಿ. 800 ಅಡಿ ಕೊರೆಸಿದರೂ ನೀರಿಲ್ಲವೆಂಬ ಚಿಂತೆ ಬೇಡ. 1200 ಅಡಿ ಆಳಕ್ಕಾದರೂ ಕೊಳವೆ ಬಾವಿ ಕೊರೆ ಜನರಿಗೆ, ದನ ಕರುಗಳಿಗೆ ನೀರು ಕೊಡಬೇಕು ಎಂದು ಆದೇಶಿಸಿದರು.

ಈವರೆಗೆ ಸುಮರು 750-800 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿ, ನೀರಿಲ್ಲವೆಂದು ಬಿಟ್ಟಿರುವ ಕೊಳವೆ ಬಾವಿಗಳಲ್ಲೇ 1 ಸಾವಿರದಿಂದ 1200 ಅಡಿಗಳಷ್ಟು ಆಳಕ್ಕೆ ಕೊರೆಸಿ, ನೀರು ಪೂರೈಸಲು ಗಮನ ಹರಿಸಿ. ಬೋರ್‍ವೆಲ್ ಎಷ್ಟೇ ಆಳಕ್ಕೆ ಹೋದರೂ ಚಿಂತೆ ಇಲ್ಲ. ನೀರು ಸಿಗುವವರೆಗೂ ಕೊಳವೆ ಬಾವಿಯನ್ನು ಕೊರೆಸಿರಿ ಎಂದು ಅವರು ಸೂಚನೆ ನೀಡಿದರು. 

ಜಿಪಂ ಪ್ರಭಾರ ಅಧ್ಯಕ್ಷೆ ಸವಿತಾ ಬಾಯಿ ಮಾತನಾಡಿ, ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಕೊಳವೆ ಬಾವಿ ಕೊರೆಯಲು ಬಂದವರು 750 ಅಡಿವರೆಗೆ ಮಾತ್ರ ಕೊರೆದು, ಇನ್ನು ತಮ್ಮಿಂದ ಆಗುವುದಿಲ್ಲವೆಂದು ವಾಪಾಸ್ಸಾಗುತ್ತಾರೆ. ಇದೇ ವಿಚಾರಕ್ಕೆ ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿ ಕೊರೆಸುವ ವಿಚಾರಕ್ಕೆ ಪದೇಪದೇ ಗಲಾಟೆ ನಡೆಯುತ್ತಿವೆ ಎಂದು ಸಮಿತಿ ಗಮನಕ್ಕೆ ತಂದರು. 

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಶಂಕರ ರೆಡ್ಡಿ, ಚಿಕ್ಕಬುಳ್ಳಾಪುರ ಭಾಗದಲ್ಲಿ ಕನಿಷ್ಟ 1200 ಅಡಿ ಆಳಕ್ಕೆ ಕೊರೆಸಿದರೂ ಬೋರ್‍ವೆಲ್‍ಗೆ ನೀರು ಸಿಗುವುದಿಲ್ಲ. ಅಲ್ಲಿನ ಕೊಳವೆ ಬಾವಿಗಳ ಆಳ ನಮಗೆ ಏನೂ ಆಳ ಎನಿಸುವುದಿಲ್ಲ. ನಿಮ್ಮ ಭಾಗದಲ್ಲಿ 750 ಆಳವೆಂದರೆ ಅಷ್ಟೊಂದು ಆಳವಾ ಎಂಬುದಾಗಿ ಪ್ರಶ್ನಿಸುತ್ತೀರಿ. ಇನ್ನು ಮುಂದೆ ಏನೂ ತೊಂದರೆಯಾಗದು, 1200 ಅಡಿವರೆಗೂ ಕೊರೆಸಿ, ಟ್ಯಾಂಕರ್ ನೀರು ಪೂರೈಕೆ ತಪ್ಪಿಸಿ ಎಂದು ಡಿಸಿಗೆ ಆದೇಶಿಸಿದರು.

ಸಂಪುಟದ ಉಪ ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಸಂಪುಟ ಉಪ ಸಮಿತಿ ಸೂಚನೆ ಮೇರೆಗೆ ಜ.14ರಂದೇ ಕೊಳವೆ ಬಾವಿಗಳನ್ನು 1200 ಅಡಿ ಆಳದವರೆಗೂ ಕೊರೆಸಲು ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸಭೆಗೆ ತಿಳಿಸಿದರು.  

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಜನ ಪ್ರತಿನಿಧಿಗಳು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News