ಮೇಲ್ಜಾತಿಗೆ ಮೀಸಲಾತಿ: ಮೇಲ್ಜಾತಿಯ ಮೌನ, ದಲಿತರ ಗೊಂದಲ!

Update: 2019-01-14 04:38 GMT

 ಈ ದೇಶದಲ್ಲಿ ಶೋಷಿತರಿಗೆ ಮೀಸಲಾತಿ ಸುಲಭದಲ್ಲಿ ಸಿಕ್ಕಿದ ಗಂಟಲ್ಲ. ಅದರ ಹಿಂದೆ ಶತಮಾನಗಳ ಹೋರಾಟವಿದೆ. ಅಂಬೇಡ್ಕರ್‌ರಂತಹ ನಾಯಕರ ತ್ಯಾಗ ಬಲಿದಾನಗಳಿವೆ. ಮೀಸಲಾತಿ ದೊರಕಿದ ಬಳಿಕವೂ ಈ ದೇಶದ ದಲಿತರು ಮತ್ತು ಶೋಷಿತ ಸಮುದಾಯದ ಸ್ಥಿತಿ ದಯನೀಯವಾಗಿಯೇ ಉಳಿದಿದೆ ಎನ್ನುವಾಗ, ಈ ದೇಶದ ಸಂವಿಧಾನ ಮೀಸಲಾತಿಯನ್ನು ಜಾರಿಗೊಳಿಸದೇ ಇದ್ದಿದ್ದರೆ ಅವರ ಸ್ಥಿತಿ ಹೇಗಿರುತ್ತಿತ್ತು? ಸ್ವಾತಂತ್ರ ಸಿಕ್ಕಿದರೂ ಈ ದೇಶದ ಅಧಿಕಾರ ಕೇವಲ ಮೇಲ್ಜಾತಿಯ ಕೈಯಲ್ಲೇ ಉಳಿದು ಬಿಡುತ್ತಿತ್ತು. ನಾಲ್ವಡಿ ಕೃಷ್ಣ ರಾಜ ಒಡೆಯರ್, ಶಾಹು ಮಹಾರಾಜರಂತಹ ಸಾಮಾಜಿಕ ಪ್ರಜ್ಞೆಯಿರುವ ನಾಯಕರಿಂದ ಚಿಗುರೊಡೆದ ಮೀಸಲಾತಿಯ ಕಲ್ಪನೆ ದಲಿತ ಮತ್ತು ಶೋಷಿತ ಸಮುದಾಯದ ನಿರಂತರ ಹೋರಾಟದ ಫಲವಾಗಿ ನಮ್ಮ ಸಂವಿಧಾನದಲ್ಲಿ ಸ್ಥಾನ ಪಡೆಯಿತು. ವಿಪರ್ಯಾಸವೆಂದರೆ, ಎರಡು ದಿನಗಳ ಹಿಂದೆ ಕಾನೂನಾಗಿ ಜಾರಿಗೊಂಡ ಶೇ. 10 ಮೀಸಲಾತಿಗೆ ಈ ಯಾವ ಹಿನ್ನೆಲೆಯೂ ಇಲ್ಲ. ಇತ್ತೀಚೆಗೆ ಸಾಚಾರ್ ವರದಿ ಈ ದೇಶದ ಮುಸ್ಲಿಮರ ಹೀನಾಯ ಸ್ಥಿತಿಯನ್ನು ಬಹಿರಂಗ ಪಡಿಸಿದ ಹಾಗೆಯೇ, ಮೇಲ್ಜಾತಿಯ ಬಡವರ ಹೀನಾಯ ಬದುಕಿನ ಚಿತ್ರಣ ನೀಡುವ ಯಾವ ವರದಿಯೂ ಈವರೆಗೆ ಸರಕಾರದ ಮುಂದೆ ಬಂದಿಲ್ಲ. ಮೇಲ್ಜಾತಿಗೆ ಮೀಸಲಾತಿಯ ಭರವಸೆಯನ್ನು ಈ ಹಿಂದೆ ಮಾಯಾವತಿಯೂ ನೀಡಿದ್ದರು. ಕಾಂಗ್ರೆಸ್‌ನ ಹಲವು ಮುಖಂಡರೂ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ ರಾಜಕೀಯ ಕಾರಣಕ್ಕೆ ಹೊರತಾದ ಯಾವ ತಳಹದಿಯೂ ಈ ಭರವಸೆಗಳಿಗೆ ಇದ್ದಿರಲಿಲ್ಲ. ಇತ್ತೀಚೆಗೆ ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕಾಗಿ ಹಲವು ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಪೂರೈಕೆಯನ್ನು ನಿರಾಕರಿಸಲಾಯಿತು. ಇದರಿಂದಾಗಿ ದೇಶಾದ್ಯಂತ ಹಲವೆಡೆ ಹಸಿವಿನಿಂದ ಬಡವರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ರೇಷನ್ ಪೂರೈಕೆಯಿಲ್ಲದೆ ಸತ್ತವರಲ್ಲಿ ಒಬ್ಬನೇ ಒಬ್ಬ ಮೇಲ್ಜಾತಿಯ ಬಡವನಿರಲಿಲ್ಲ.

ಸತ್ತವರೆಲ್ಲರೂ ಕೆಳಜಾತಿಗೆ ಸೇರಿದವರೇ ಆಗಿದ್ದಾರೆ. ಅಪೌಷ್ಟಿಕತೆಯ ಅಂಕಿಅಂಶಗಳನ್ನು ಗುರುತಿಸಿದಾಗ, ಕೆಳಜಾತಿ, ಶೂದ್ರ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿದವರೇ ಅಧಿಕಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಮೇಲ್ಜಾತಿಯ ಪಾಲು ಅಧಿಕವಿದೆ. ಮೀಸಲಾತಿ ಜಾರಿಗೊಂಡು 50 ವರ್ಷಗಳು ಕಳೆದ ಬಳಿಕವೂ ಶೋಷಿತ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಮೇಲ್ಜಾತಿಗಳು ತಲುಪಿರುವ ದಾರಿಯ ಅರ್ಧವನ್ನೂ ಕ್ರಮಿಸಲು ಸಾಧ್ಯವಾಗಿಲ್ಲ. . ಕೇಂದ್ರದ ಸಚಿವ ಸಂಪುಟದಲ್ಲಿ ಅತ್ಯಧಿಕ ಪ್ರಾತಿನಿಧ್ಯವನ್ನು ಪಡೆದವರು ಮೇಲ್ಜಾತಿಯವರೇ ಆಗಿದ್ದಾರೆ. ಅಂದರೆ ರಾಜಕೀಯ ಕ್ಷೇತ್ರಗಳಲ್ಲೂ ಮೇಲ್ಜಾತಿಯೇ ಬಲಾಢ್ಯವಾಗಿದೆ. ಹೀಗಿರುವಾಗ ಮೇಲ್ಜಾತಿಗೆ ಶೇ. 10ರಷ್ಟು ಮೀಸಲಾತಿಯನ್ನು ನೀಡಿರುವ ಸರಕಾರ, ಯಾವ ಕಾರಣಕ್ಕಾಗಿ ಈ ಕಾನೂನನ್ನು ಆತುರಾತುರವಾಗಿ ಜಾರಿಗೆ ತಂದಿತು? ಬಹುಶಃ ಒಂದು ಮಹತ್ವದ ಕಾನೂನು ನಾಲ್ಕೇ ದಿನಗಳಲ್ಲಿ ಲೋಕಸಭೆ, ರಾಜ್ಯಸಭೆಗಳನ್ನು ದಾಟಿ ರಾಷ್ಟ್ರಪತಿಯ ಸಮ್ಮತಿಯನ್ನು ಪಡೆಯುತ್ತಿರುವುದು ದೇಶದ ಇತಿಹಾಸದಲ್ಲೇ ಮೊತ್ತ ಮೊದಲಿರಬೇಕು. ಶೇ. 10 ಮೀಸಲಾತಿಯ ಉದ್ದೇಶ, ಅಂಬೇಡ್ಕರ್ ಮೀಸಲಾತಿಯ ಆಶಯವನ್ನು ಬುಡಮೇಲು ಮಾಡುವುದೇ ಆಗಿದೆ. ಮೀಸಲಾತಿ ಜಾರಿಯಲ್ಲಿರುವುದು ಈ ದೇಶದ ಬಡವರನ್ನು ಶ್ರೀಮಂತರಾಗಿಸಲು ಎನ್ನುವ ಹೊಸ ವ್ಯಾಖ್ಯಾನವನ್ನು ಈ ಮೂಲಕ ಜನರ ಮನದೊಳಗೆ ಇಳಿಸಿದೆ.

ಶೇ. 10 ಮೀಸಲಾತಿಯಿಂದ ಮೇಲ್ಜಾತಿಗೆ ದೊಡ್ಡ ಪ್ರಮಾಣದ ಲಾಭವೇನೂ ಆಗಲಿಕ್ಕಿಲ್ಲ. ಆದರೆ ಶೋಷಿತ ಸಮುದಾಯ ಮಾತ್ರ ಇದರಿಂದಾಗಿ ಹಿಂದಕ್ಕೆ ಚಲಿಸತೊಡಗುತ್ತದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿರಾಶಾದಾಯಕವಾಗಿದೆ! ಮೊದಲನೆಯದಾಗಿ 2018ರ ಡಿಸೆಂಬರ್ ವೇಳೆಗೆ ಭಾರತದ ನಿರುದ್ಯೋಗ ದರವು ಶೇ.7.4ಕ್ಕೇರಿದ್ದು ಕಳೆದ 15 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ಮುಟ್ಟಿದೆ. ಎರಡನೆಯದಾಗಿ 2017 ಮತ್ತು 2018ರಲ್ಲಿ ಕೆಲಸ ಕಳೆದುಕೊಂಡ ಸುಮಾರು 1.1 ಕೋಟಿಯಷ್ಟು ಜನರು ಈ ನಿರುದ್ಯೋಗಿ ಪಡೆಯಲ್ಲಿ ಸೇರಿಕೊಂಡಿದ್ದಾರೆ . ಈಗಾಗಲೇ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಶೇ.82ರಷ್ಟು ಉದ್ಯೋಗಗಳು ನಷ್ಟವಾಗಿವೆ ಮತ್ತು ನಿರುದ್ಯೋಗದ ಶೇ.80ರಷ್ಟು ಹೊರೆಯನ್ನು ಮಹಿಳೆಯರೇ ಹೊರುತ್ತಿದ್ದಾರೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ)ಯು 2018ರಲ್ಲಿ ಹೊರತಂದಿರುವ ವರ್ಲ್ಡ್ ಎಂಪ್ಲಾಯ್ಮೆಂಟ್ ಆ್ಯಂಡ್ ಸೋಷಿಯಲ್ ಔಟ್ಲುಕ್ (ಜಾಗತಿಕ ಉದ್ಯೋಗ ಮತ್ತು ಸಾಮಾಜಿಕ ದರ್ಶನ) ವರದಿಯು ಭಾರತದ ಶೇ.80ರಷ್ಟು ಉದ್ಯೋಗಗಳನ್ನು ಅಭದ್ರವೆಂದು ಪರಿಗಣಿಸಿದೆ. ಅದರಲ್ಲಿ ಕೇವಲ ಶೇ.20ರಷ್ಟು ಉದ್ಯೋಗಿಗಳು ಮಾತ್ರ ನಿಯಮಿತವಾಗಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ದು ಇನ್ನುಳಿದ ಶೇ.40ರಷ್ಟು ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. ಸರಕಾರಿ ಕ್ಷೇತ್ರದಲ್ಲಿನ ನೇಮಕಾತಿ ಆಮೆಗತಿಯಲ್ಲಿದೆ. ಅಷ್ಟೇ ಅಲ್ಲದೆ ಭರ್ತಿಯಾಗದೆ ಉಳಿದುಕೊಂಡಿರುವ ಬ್ಯಾಕ್ ಲಾಗ್ ಹುದ್ದೆಗಳ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಮೀಸಲುವರ್ಗಕ್ಕೆ ಸೇರಿದವಾಗಿವೆ.

ಅದೇ ಸಮಯದಲ್ಲಿ ಉದ್ಯೋಗಾವಕಾಶಗಳ ಪ್ರಮುಖ ಮೂಲವಾಗಿದ್ದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳು ನೋಟು ನಿಷೇಧ ಮತ್ತು ಜಿಎಸ್‌ಟಿಯೆಂಬ ಅವಳಿ ಸರ್ಜಿಕಲ್ ದಾಳಿಗೆ ಸಿಲುಕಿ ತತ್ತರಿಸಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಮೀಸಲಾತಿಯು ಶೇ. 50ರ ಮಿತಿಯನ್ನು ಮೀರಬಾರದೆಂಬ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರಕಾರವು ಘೋಷಿಸಿರುವ ಶೇ.10ರ ಮೀಸಲಾತಿಯು ಬಿಜೆಪಿಗೆ ತನ್ನ ಚುನಾವಣಾ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಬಹುದು. ಹಾಗೆಯೇ ಹಿಂದಿ ಹೃದಯ ಭಾಗದಲ್ಲಿ ನಡೆದ 2018ರ ಶಾಸನಸಭಾ ಚುನಾವಣೆಗಳಲ್ಲಿ ತಾನು ಕಳೆದುಕೊಂಡ ಮತದಾರರ ನಡುವೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು.

ಈ ಎಲ್ಲ ಕಾರಣಗಳಿಂದ, ರಾತ್ರೋರಾತ್ರಿ ಅತ್ಯಂತ ಗೊಂದಲಕಾರಿಯಾಗಿ ಜಾರಿಗೆ ತಂದ ಮೇಲ್ಜಾತಿಗೆ ಮೀಸಲಾತಿ ಎನ್ನುವ ಜುಮ್ಲಾ ಈ ದೇಶಕ್ಕೆ ಎಸಗಿದ ಮಹಾ ದ್ರೋಹವಾಗಿದೆ. ಇದರ ವಿರುದ್ಧ ಕೆಳ ಸಮುದಾಯ ಮಾತ್ರವಲ್ಲ, ಮೇಲ್ಜಾತಿಯಲ್ಲಿರುವ ನಿಜವಾದ ಅರ್ಥದಲ್ಲಿ ಬಡವರು ಅಂದರೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಳಲಿರುವವರು ಧ್ವನಿಯೆತ್ತಬೇಕಾಗಿದೆ. ವಿಪರ್ಯಾಸವೆಂದರೆ ಈವರೆಗೆ ಮೀಸಲಾತಿಯ ವಿರುದ್ಧ ಬೀದಿಗಿಳಿಯುತ್ತಿದ್ದ ಮೇಲ್ಜಾತಿಯ ಸಂಘಟನೆಗಳು ಈ ಬಗ್ಗೆ ಗಾಢ ವೌನವನ್ನು ತಾಳಿವೆ. ಈ ಮೀಸಲಾತಿಯ ಬೆನ್ನಿಗೆ ಮಾಯಾವತಿ, ಪಾಸ್ವಾನ್‌ರಂತಹ ನಾಯಕರು ನಿಂತಿರುವುದರಿಂದ ಇದನ್ನು ಯಾವ ರೀತಿಯಲ್ಲಿ ಪ್ರತಿರೋಧಿಸಬೇಕು ಎನ್ನುವುದು ತಿಳಿಯದೆ ಶೋಷಿತ ಸಮುದಾಯ ಗೊಂದಲದಲ್ಲಿದೆ. ಮೋದಿ ಮತ್ತು ಅವರ ಬಳಗದ ನಡೆಗಿಂತಲೂ ಮಾಯಾವತಿ, ಪಾಸ್ವಾನ್‌ರಂತಹ ನಾಯಕರ ನಡೆಗಳೇ ಈ ದೇಶದ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News