ಮೋದಿ ವೆಬ್ ಸೈಟ್ ಹ್ಯಾಕ್ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡ ಹ್ಯಾಕರ್

Update: 2019-01-14 09:29 GMT

ಹೊಸದಿಲ್ಲಿ, ಜ.14: ಫ್ರೆಂಚ್ ಸೈಬರ್ ಸೆಕ್ಯುರಿಟಿ ಸಂಶೋಧಕ ಮತ್ತು ಎಥಿಕಲ್ ಹ್ಯಾಕರ್ ಈಲಿಯಟ್ ಆಲ್ಡರ್ಸನ್ ಎಂಬವರು  ಸೋಮವಾರ ಟ್ವೀಟ್ ಮಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದೆ ಹಾಗೂ ಅದರಲ್ಲಿನ ಸಂಪೂರ್ಣ ಮಾಹಿತಿಯನ್ನು ಯಾರೋ ಅನಧಿಕೃತವಾಗಿ ಪಡೆದುಕೊಂಡಿದ್ದಾರೆಂದು ಹೇಳಿಕೊಂಡಿದ್ದಾರೆ. 

ಹ್ಯಾಕ್ ಮಾಡಿದ ವ್ಯಕ್ತಿ ನರೇಂದ್ರ ಮೋದಿಯ ವೆಬ್ ಸೈಟ್ ನ ಸರ್ವರ್ ನಲ್ಲಿ ಒಂದು ಸರಳ ಟೆಕ್ಸ್ಟ್ ಫೈಲ್ ಅಪ್‍ಲೋಡ್ ಮಾಡಿ ಹ್ಯಾಕ್ ಆಗಿದೆ ಎಂಬುದಕ್ಕೆ ಪುರಾವೆ ನೀಡಿ ನಂತರ ತನಗೆ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದಾರೆ.

ಆಲ್ಡರ್ಸನ್ ಅವರ ನಿಜ ನಾಮಧೇಯ ರಾಬರ್ಟ್ ಬ್ಯಾಪ್ಟಿಸ್ಟ್ ಎಂದಾಗಿದ್ದು, ಭಾರತದ ಆಧಾರ್ ಯೋಜನೆ ಹಾಗೂ ಆಧಾರ್ ಆ್ಯಪ್ ನಲ್ಲಿನ ಹಲವಾರು ಲೋಪದೋಷಗಳನ್ನು ಪತ್ತೆ ಹಚ್ಚಿ ಅವರು ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ತಿಳಿಸಿದ್ದರು.

ಅವರ ಇತ್ತೀಚಿಗಿನ ಟ್ವೀಟ್ ಪ್ರಕಾರ ಮೋದಿ ವೆಬ್ ಸೈಟ್ ನ ಎಲ್ಲಾ ಮಾಹಿತಿ ಅವರ ಬಳಿಯಿಲ್ಲ ಬದಲಾಗಿ ಬೇರೆ ಯಾರೋ ಅದನ್ನು ಹ್ಯಾಕ್ ಮಾಡಿ ಅವರಿಗೆ ತಿಳಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಮೋದಿಯನ್ನೂ ಟ್ಯಾಗ್ ಮಾಡಿರುವ ಆಲ್ಡರ್ಸನ್, ಮೋದಿ ತಮ್ಮನ್ನು ಖಾಸಗಿಯಾಗಿ ಸಂಪರ್ಕಿಸಿದರೆ ಎಲ್ಲಾ ಮಾಹಿತಿ ನೀಡುವುದಾಗಿ ತಿಳಿಸಿದ್ದರು.

ಈ ಬೆಳವಣಿಗೆ ಬೆಳಕಿಗೆ ಬರುತ್ತಿದ್ದಂತೆಯೇ ಮೋದಿ ವೆಬ್ ಸೈಟ್ ನಡೆಸುವ ತಂಡ ಆಲ್ಡರ್ಸನ್ ಅವರನ್ನು ಸಂಪರ್ಕಿಸಿದ್ದು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆಯೆಂದು ತಿಳಿದು ಬಂದಿದ್ದು, ಆಲ್ಡರ್ಸನ್ ಈ ಬಗ್ಗೆ ಕೂಡ ಟ್ವೀಟ್ ಮಾಡಿದ್ದಾರೆ.

ಈ ವೆಬ್ ಸೈಟ್ ನಲ್ಲಿ ಮೋದಿಯ ಜೀವನ ಚರಿತ್ರೆ, ಆವರ ಕಾರ್ಯಕ್ರಮಗಳ ವಿವರ ಮತ್ತಿತರ ಮಾಹಿತಿಗಳಿದ್ದರೂ ಅಂತಹ ಸೂಕ್ಷ್ಮ ಮಾಹಿತಿಗಳಿಲ್ಲ. ಆದರೂ ಹ್ಯಾಕ್ ಮಾಡುವುದರಿಂದ ಈ ವೆಬ್ ಸೈಟ್ ಅನ್ನು ಎಷ್ಟು ಜನರು, ಹೇಗೆ ಉಪಯೋಗಿಸುತ್ತಾರೆಂಬ ಬಗ್ಗೆ ಮಾಹಿತಿ ದೊರೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News