ಮಂಡ್ಯವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಚಿಂತನೆ ಇದೆ: ಎಚ್.ಡಿ.ಕುಮಾರಸ್ವಾಮಿ

Update: 2019-01-14 18:44 GMT

ಮಂಡ್ಯ,ಜ.14: ಮಂಡ್ಯ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಚಿಂತನೆ ಸರ್ಕಾರದ್ದಾಗಿದೆ. ಆ ಮೂಲಕ ಸಮಗ್ರ ಅಭಿವೃದ್ಧಿಯು ತಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸಲಾಗಿದೆ. ವರ್ತುಲ ರಸ್ತೆ, ನಗರ ವ್ಯಾಪ್ತಿ ವಿಸ್ತರಣೆ, ಮೈಷುಗರ್ ಅಭಿವೃದ್ಧಿ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ನಗರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗಿದೆ. ಸರ್ಕಾರದ ರಚನೆಯಾದ 7 ತಿಂಗಳಲ್ಲಿ 3 ಸಭೆ ನಡೆಸಲಾಗಿದೆ ಎಂದು ಹೇಳಿದರು.

ಮಂಡ್ಯದ ಸಮಗ್ರ ಅಭಿವೃದ್ಧಿ ಈವರೆಗೆ ಯಾವೊಂದು ಸರ್ಕಾರಗಳು ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿಲ್ಲ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ. ಹೀಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ನನ್ನ ವೈಯಕ್ತಿಕ ನಿಲುವಾಗಿದೆ ಎಂದರು.

ಈ ಮಾತನ್ನು ನಾನು ಪದೇ ಪದೇ ಹೇಳುತ್ತಿದ್ದೇನೆ. ಯಾರನ್ನೂ ಮೆಚ್ಚಿಸಲು ಈ ಮಾತು ಹೇಳುತ್ತಿಲ್ಲ. ನಾನು 1985ರಿಂದ ಬೆಂಗಳೂರು-ಮೈಸೂರು ನಡುವೆ ಓಡಾಡುವಾಗಿ ಮಂಡ್ಯ ನಗರವನ್ನು ಗಮನಿಸುತ್ತಲೇ ಇದ್ದೇನೆ. ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದು ವಿಷಾದಿಸಿದರು.

ಮಿಮ್ಸ್, ಕಾವೇರಿ ಭವನ, ಲೋಕೋಪಯೋಗಿ ಇಲಾಖೆ ಭವನದ ನಿರ್ಮಾಣದ ಹೊರತಾಗಿ ನಗರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಈ ಕೊರಗು ಮಂಡ್ಯ ಜನರ ಜತೆಗೆ ನನಗೂ ಇದೆ. ಜನರ ನಿರೀಕ್ಷೆಗಳನ್ನು ತಲುಪುವಲ್ಲಿ ರಾಜಕಾರಣಿಗಳು ಅನ್ಯಾಯ ಮಾಡಿದ್ದೇವೆಯೋ ಎನ್ನುವ ಭಾವನೆ ನನ್ನನ್ನು ಕಾಡುತ್ತಿದೆ. ಹೀಗಾಗಿಯೇ ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ರೂ. ಜತೆಗೆ ಕೆಲವು ನೀರಾವರಿ ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ ಕಾಳಜಿಯಿದೆ ಎಂದು ಹೇಳಿದರು.

ಆದರೆ, ಬಿಜೆಪಿಯವರು 'ಇದು ಮಂಡ್ಯ ಬಜೆಟ್' ಎಂದು ಟೀಕಿಸಿದರು. ಅಪಪ್ರಚಾರ ಮಾಡಿದರು. ಆದರೆ, ನಾನು ಮುಖ್ಯಮಂತ್ರಿಯಾಗಲು ಮಂಡ್ಯ ಜಿಲ್ಲೆಯ ದೊಡ್ಡ ಪಾಲಿದೆ. ಹೀಗಾಗಿ ಮುಂದಿನ ಬಜೆಟ್‍ನಲ್ಲಿ ಮಂಡ್ಯ ನಗರದ ಸಮಗ್ರ ಅಭಿವೃದ್ಧಿ ಸಂಬಂಧ ಯೋಜನೆಗಳನ್ನು ಪ್ರಸ್ತಾಪಿಸಲಾಗುವುದು. ಹೊಸ ರೀತಿಯಲ್ಲಿ ಮೈಷುಗರ್ ಪುನಃಶ್ಚೇತನ, ಉದ್ಯೋಗ ಸೃಷ್ಟಿ, ವರ್ತುಲ ರಸ್ತೆ ನಿರ್ಮಾಣ, ನಗರದೊಳಗಿನ ರಸ್ತೆಗಳ ಅಭಿವೃದ್ಧಿ, ನಗರ ವ್ಯಾಪ್ತಿಯ ವಿಸ್ತರಣೆಗೆ ಕ್ರಮ ವಹಿಸಲಾಗುವುದು. ಒಂದು ರಾತ್ರಿಯಲ್ಲಿ ಎಲ್ಲವನ್ನೂ ಬದಲಾವಣೆ ಮಾಡಲಾಗದು. ಅದು ಸಾಧ್ಯವೂ ಇಲ್ಲ. ಇದಕ್ಕೆ ಸ್ವಲ್ಪ ಕಾಲಾವಕಾಶಬೇಕು ಎಂದು ಬಜೆಟ್ ಅಂಶಗಳ ಬಗ್ಗೆ ಮುನ್ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News