ಯುವತಿಯರ ಕನ್ಯತ್ವವನ್ನು ಸೀಲ್ ಮಾಡಿದ ಬಾಟಲಿಗೆ ಹೋಲಿಸಿದ ಪ್ರೊಫೆಸರ್ !

Update: 2019-01-15 07:27 GMT

ಕೊಲ್ಕತ್ತಾ, ಜ. 15: ಇಲ್ಲಿನ ಜಾಧವಪುರ ವಿವಿಯ ಪ್ರೊಫೆಸರ್ ಒಬ್ಬರು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಯುವತಿಯರ ಕನ್ಯತ್ವವನ್ನು ಸೀಲ್ ಮಾಡಿದ ಬಾಟಲಿ ಅಥವಾ ಪ್ಯಾಕೆಟ್‌ಗೆ ಹೋಲಿಸುವ ಮೂಲಕ ವಿವಾದ ಉಂಟುಮಾಡಿದ್ದಾರೆ.

ವಿವಿಯ ಅಂತರ್ ರಾಷ್ಟ್ರೀಯ ಸಂಬಂಧ ವಿಭಾಗದಲ್ಲಿ ಒಂದು ದಶಕದಿಂದ ಪ್ರಾಧ್ಯಾಪಕನಾಗಿರುವ ಕನಕ ಸರ್ಕಾರ್, ವಿವಾದದ ಸುಳಿವು ಅರಿತು ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಎಷ್ಟೋ ಮಂದಿ ತಮ್ಮ ಪತ್ನಿಯ ಕನ್ಯತ್ವದ ಬಗ್ಗೆ ಅರಿವು ಇಲ್ಲದೇ ಮೋಸ ಹೋಗುತ್ತಿದ್ದಾರೆ ಎಂದೂ ಅವರು ಹೇಳಿದ್ದರು. ಇದು ವೈರಲ್ ಆಗುತ್ತಿದ್ದಂತೆ ಮತ್ತೊಂದು ಹೇಳಿಕೆ ಪೋಸ್ಟ್ ಮಾಡಿದ ಪ್ರೊಫೆಸರ್, ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ತನಗೆ ಇದೆ ಎಂದು ಪ್ರತಿಪಾದಿಸಿದ್ದರು.

ಆದರೆ ಕೆಲವೇ ಕ್ಷಣದಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಬಗ್ಗೆ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿನಿಯರು ತಮ್ಮ ಆಕ್ರೋಶವನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದರು. ಇಂಥ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಈ ಪ್ರಾಧ್ಯಾಪಕ ಕ್ಯಾಂಪಸ್‌ನಲ್ಲಿ ಕೂಡಾ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಪಡಿಸಿದರು. ವಿದ್ಯಾರ್ಥಿಗಳು ಸಭೆ ಸೇರಿ ಇವರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸುಪ್ರೀಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಯನ್ನು ಕಿತ್ತುಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ತಮ್ಮ ಎರಡನೇ ಪೋಸ್ಟ್‌ನಲ್ಲಿ ಸರ್ಕಾರ್ ಪ್ರತಿಪಾದಿಸಿದ್ದರು.

"ಮಹಿಳೆ ವಿವಿಧ ಕಾರಣಕ್ಕೆ ಕನ್ಯತ್ವ ಕಳೆದುಕೊಳ್ಳಬಹುದು, ಉದಾಹರಣೆಗೆ ಕ್ರೀಡಾ ಚಟುವಟಿಕೆಗಳು. ಈ ಪ್ರೊಫೆಸರ್‌ನ ಶೈಕ್ಷಣಿಕ ಹಿನ್ನೆಲೆಯೇ ಪ್ರಶ್ನಾರ್ಹ. ಇವರು ವಿದ್ಯಾರ್ಥಿಗಳಿಗೆ ಏನು ಬೋಧಿಸುತ್ತಾರೆ ?" ಎಂದು ನಗರದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಶ್ವತಿ ಘೋಷ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News