ಜ. 10ರ ಸಭೆಯ ವಿವರ, ಸಿವಿಸಿ, ಪಟ್ನಾಯಕ್ ವರದಿಗಳನ್ನು ಬಹಿರಂಗಗೊಳಿಸಿ: ಪ್ರಧಾನಿಗೆ ಖರ್ಗೆ ಪತ್ರ

Update: 2019-01-15 17:22 GMT

ಹೊಸದಿಲ್ಲಿ, ಜ. 15: ಅಲೋಕ್ ವರ್ಮಾ ಅವರ ವಜಾ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಕಾರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. ಇದರಿಂದ ಸಾರ್ವಜನಿಕರು ತಮ್ಮದೇ ಆದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

 ಸಿಬಿಐಯ ಮಧ್ಯಂತರ ನಿರ್ದೇಶಕರನ್ನಾಗಿ ಎಂ. ನಾಗೇಶ್ವರ ರಾವ್ ಅವರನ್ನು ನೇಮಕ ಮಾಡಿರುವುದು ಕಾನೂನು ಬಾಹಿರ ಎಂದು ಖರ್ಗೆ ಹೇಳಿದ್ದಾರೆ ಹಾಗೂ ಸಿಬಿಐಗೆ ನೂತನ ವರಿಷ್ಠರನ್ನು ಕೂಡಲೇ ನೇಮಕ ಮಾಡಲು ಆಯ್ಕೆ ಸಮಿತಿಯ ಸಭೆ ಆಯೋಜಿಸುವಂತೆ ಅವರು ಆಗ್ರಹಿಸಿದ್ದಾರೆ.

 ಕೇಂದ್ರ ಸರಕಾರದ ಈ ಕ್ರಮ ಸಿಬಿಐಗೆ ಸ್ವತಂತ್ರ ನಿರ್ದೇಶಕರನ್ನು ಹೊಂದುವ ಬಗ್ಗೆ ಭೀತಿಯನ್ನು ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ. ವರ್ಮಾ ವಜಾಕ್ಕೆ ಸರಕಾರ ಕಾರಣ ತಿಳಿಸಬೇಕು ಹಾಗೂ ಕೇಂದ್ರ ವಿಚಕ್ಷಣಾ ಆಯೋಗದ ವರದಿ, ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ವರದಿ ಹಾಗೂ ಜನವರಿ 10 ಸಭೆಯ ನಿರ್ಧಾರವನ್ನು ಬಹಿರಂಗಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

 ನಾವು ಅನುಸರಿಸಬೇಕಾದ ಕಾನೂನು ಕ್ರಮ ಹಾಗೂ ನ್ಯಾಯದ ನಿಯಮಗಳನ್ನು ಸಮಿತಿಯ ಸದಸ್ಯರಿಗೆ ಮನದಟ್ಟು ಮಾಡುವ ನನ್ನ ಉತ್ತಮ ಪ್ರಯತ್ನದ ಹೊರತಾಗಿಯೂ ನ್ಯಾಯಮೂರ್ತಿ ಪಟ್ನಾಯಕ್ ನಿರಾಕರಿಸಲ್ಪಟ್ಟ ವರದಿಯ ಆಧಾರದ ಮೇಲೆ ಸಮಿತಿಯ ಸದಸ್ಯರು ನಿರ್ಧಾರ ತೆಗೆದುಕೊಂಡರು ಎಂದು ಖರ್ಗೆ ಅವರು ಪತ್ರದಲ್ಲಿ ಹೇಳಿದ್ದಾರೆ. ವರ್ಮಾ ವಿರುದ್ಧ ಕೇಂದ್ರ ವಿಚಕ್ಷಣಾ ಆಯೋಗದ ತನಿಖೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಟ್ನಾಯಕ್ ಅವರು, ರಾಕೇಶ್ ಅಸ್ತಾನ ಪ್ರತಿಪಾದಿಸಿದಂತೆ ಅಲೋಕ್ ವರ್ಮಾ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳು ಇಲ್ಲ ಎಂದು ಸಾಕ್ಷಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ನ್ಯಾಯಾಂಗಕ್ಕೆ ಮುಜುಗರ ಉಂಟಾಗಲು ನೇರವಾಗಿ ಕಾರಣವಾದ ಸರಕಾರದ ಈ ಬದಲಾವಣೆ ಕ್ರಮಗಳು ದುರಾದೃಷ್ಟಕರ ಎಂದು ಖರ್ಗೆ ಹೇಳಿದ್ದಾರೆ. ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಬಲವಂತಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂವರು ಸದಸ್ಯರ ಈ ಸಮಿತಿಯಲ್ಲಿ ಖರ್ಗೆ ಅವರು ಪ್ರತಿಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಮತದಿಂದ ಸಿಬಿಐ ನಿರ್ದೇಶಕರ ಹುದ್ದೆಯಿಂದ ಅಲೋಕ್ ಕುಮಾರ್ ವರ್ಮಾ ಅವರನ್ನು ವರ್ಗಾಯಿಸಲಾಗಿದೆ. ಮೋದಿ ಹಾಗೂ ಸಿಕ್ರಿ ಅವರು ವರ್ಮಾ ವರ್ಗಾವಣೆ ನಿರ್ಧಾರಕ್ಕೆ ಪರವಾಗಿ ಹಾಗೂ ಖರ್ಗೆ ಅದಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News