ಮಂಗನ ಕಾಯಿಲೆ ಶಂಕೆ: ಶಿವಮೊಗ್ಗದಲ್ಲಿ ಮತ್ತೆ ಮೂವರ ಸಾವು

Update: 2019-01-15 12:55 GMT

ಶಿವಮೊಗ್ಗ, ಜ. 15: ಮಂಗನ ಕಾಯಿಲೆ ಭೀತಿಯಲ್ಲಿರುವ ಸಾಗರ ತಾಲೂಕಿನ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ವಿವಿಧ ಗ್ರಾಮಗಳ ಮೂವರು ಶಂಕಿತ ಮಂಗನ ಕಾಯಿಲೆ (ಕೆಎಫ್‍ಡಿ) ಯಿಂದ ಮೃತಪಟ್ಟಿರುವ ಘಟನೆ ಭಾನುವಾರ ಹಾಗೂ ಸೋಮವಾರದಂದು ನಡೆದಿದೆ. ಈ ಮೂವರ ಸಾವಿನೊಂದಿಗೆ ಅರಲಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಇಲ್ಲಿಯವರೆಗೂ ಮೃತಪಟ್ಟವರ ಸಂಖ್ಯೆ ಒಟ್ಟಾರೆ 9ಕ್ಕೇರಿದಂತಾಗಿದೆ. 

ಈ ನಡುವೆ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಗ್ರಾಮ ಪಂಚಾಯತ್ ವೊಂದರ ಪಿಡಿಓ ಸೇರಿದಂತೆ ಮತ್ತೆ ಮೂವರಲ್ಲಿ ಕೆಎಫ್‍ಡಿ ರೋಗ ಲಕ್ಷಣಗಳು ಕಂಡುಬಂದಿದೆ. ಇದರಲ್ಲಿ ಇಬ್ಬರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಸಾವು: ಅರಲಗೋಡು ಸರಹದ್ದಿನಲ್ಲಿರುವ ಬಿಳಿಗಾರು ಗ್ರಾಮದ ನಿವಾಸಿ ಕೂಲಿಕಾರ ಭೀಮರಾಜ್ ಬಸಪ್ಪ (49) ಎಂಬವರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇವರು ಶಂಕಿತ ಕೆಎಫ್‍ಡಿಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಅವರು ಅಸುನೀಗಿದ್ದಾರೆ.

ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಲಗೋಡು ವಾಟಮಕ್ಕಿಯ ನಿವಾಸಿ ಸವಿತಾ ನಾರಾಯಣ್ (52) ಎಂಬವರು ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ ಕಂಚೀಕೈ ಗ್ರಾಮದ ಕೃಷಿ ಕೂಲಿ ಕಾರ್ಮಿಕ ಹಾಲಪ್ಪ (50) ಎಂಬವರು ತೀವ್ರ ಜ್ವರದಿಂದ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. 

ಇತ್ತೀಚೆಗೆ ಇವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಆದರೆ ಮತ್ತೆ ಜ್ವರ ಹೆಚ್ಚಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ಕುಟುಂಬದವರು ನಿರ್ಧರಿಸಿದ್ದರು. ಆದರೆ ಸೋಮವಾರ ಸಂಜೆ ಅವರು ಮನೆಯಲ್ಲಿಯೇ ಅಸುನೀಗಿದ್ದಾರೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. 

ಆಸ್ಪತ್ರೆಗೆ ದಾಖಲು: ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡವಳ್ಳಿ ಮಜಿರೆಯ ರವಿಕೀರ್ತಿ ಮತ್ತು ದೊಂಬೆಕೈ ಮಜಿರೆಯ ಲಕ್ಷ್ಮೀದೇವಿ ಎಂಬವರಲ್ಲಿ ಕೆಎಫ್‍ಡಿ ರೋಗಲಕ್ಷಣಗಳು ಕಂಡುಬಂದಿವೆ. ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‍ಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುತ್ತವೆ. 

ಹಾಗೆಯೇ ಅರಲಗೋಡು ಗ್ರಾ.ಪಂ.ನ ಸರಹದ್ದಿನಲ್ಲಿರುವ ಭಾನುಕುಳಿ ಗ್ರಾಮ ಪಂಚಾಯತ್ ಪಿಡಿಓ ಮುಕ್ತಾ ವಿ. ಮೊಗೇರ ಎಂಬುವರು ಸೋಮವಾರ ಜ್ವರದಿಂದ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. 

ಮೃತ ಮಂಗ ಪತ್ತೆ: ಸಾಗರ ತಾಲೂಕಿನ ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ಸತ್ತಮಂಗ ಪತ್ತೆಯಾಗಿದೆ. ಆರೋಗ್ಯ ಇಲಾಖೆ, ಪಶು ಇಲಾಖೆಯ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ನಂತರ ಮಂಗದ ದೇಹವನ್ನು ದಹಿಸಿದ್ದಾರೆ. ಇತ್ತೀಚೆಗಷ್ಟೆ ಸಮೀಪದ ಇರುವಕ್ಕಿ ಗ್ರಾಮದಲ್ಲಿಯೂ ಮೃತ ಮಂಗವೊಂದು ಪತ್ತೆಯಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News