ಸಮ್ಮಿಶ್ರ ಸರಕಾರ ಬೀಳಬೇಕೆಂಬುದು ಬಿಜೆಪಿಯ ಬಯಕೆಯೂ ಹೌದು: ಶಾಸಕ ಸಿ.ಟಿ ರವಿ

Update: 2019-01-15 14:53 GMT

ಚಿಕ್ಕಮಗಳೂರು, ಜ.15: ರಾಜ್ಯದ ಸಮ್ಮಿಶ್ರ ಸರಕಾರವನ್ನು ಜನತೆ ಬಯಸಿದ್ದಲ್ಲ. ಕಾಂಗ್ರೆಸ್-ಜೆಡಿಎಸ್ ನದ್ದು ಅಪವಿತ್ರ ಮೈತ್ರಿಯಾಗಿದೆ. ರಾಜ್ಯ ಸಮ್ಮಿಶ್ರ ಸರಕಾರ ಬೀಳಬೇಕೆಂದು ರಾಜ್ಯದ ಜನತೆ ಬಯಸಿದ್ದಾರೆ. ಅದು ಬಿಜೆಪಿಯ ಬಯಕೆಯೂ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.

ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದೆ. ಈ ಸರಕಾರ ಬೀಳಲಿ ಎಂದು ಜನತೆ ಬಯಸುತ್ತಿದ್ದಾರೆ. ನಾವುಗಳೂ ಏನು ಸನ್ಯಾಸಿಗಳಲ್ಲ. ನಮ್ಮ ಬಯಕೆಯೂ ಸರಕಾರ ಬೀಳಲಿ ಎಂಬುದಾಗಿದೆ ಎಂದ ಅವರು, ಈ ಹಿಂದೆ ದೇವೇಗೌಡರೇ ಇಂತಹ ನೀಚ ಮುಖ್ಯಮಂತ್ರಿಯನ್ನು ತಮ್ಮ ಜೀವನದಲ್ಲಿ ಎಂದಿಗೂ ನೋಡಿರಲಿಲ್ಲ ಎಂದು ಸಿದ್ದರಾಮಯ್ಯ ಕುರಿತು ಹೇಳಿದ್ದರು. ಮಾಜಿ ಪ್ರಧಾನಿಗಳೂ, ಹಿರಿಯರೂ ಆದ ದೇವೇಗೌಡರು ಇಂತಹ ಮಾತು ಹೇಳಿದ್ದರು. ಆದರೆ ತಾವು ಎಂದೂ ಸಹ ಇಂತಹ ಕೆಟ್ಟ ಪದವನ್ನು ಬಳಕೆ ಮಾಡುವುದಿಲ್ಲ. ರಾಜಕೀಯವಾಗಿ ವೈಷಮ್ಯವಿದ್ದರೂ ಸಹ ಇಂತಹ ಪದಗಳನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದರು.

ಮಿತ್ರ ಪಕ್ಷಗಳಲ್ಲಿಯೇ ಹೊಂದಾಣಿಕೆ ಇಲ್ಲ. ದಿನೇಶ್ ಗುಂಡೂರಾವ್ ಒಂದು ರೀತಿಯ ಹೇಳಿಕೆ ಕೊಡುತ್ತಾರೆ. ಎ.ಟಿ.ರಾಮಸ್ವಾಮಿ, ಎಚ್.ಡಿ.ರೇವಣ್ಣ ಎಲ್ಲರೂ ಒಂದಲ್ಲ ಒಂದು ರೀತಿಯ ಭಿನ್ನ ಹೇಳಿಕೆಗಳನ್ನು ಕೊಡುತ್ತಾರೆ. ಹೊಟ್ಟೆಯಲ್ಲಿ ಇಷ್ಟೊಂದು ವಿಷ ಇಟ್ಟುಕೊಂಡು ಒಟ್ಟಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತದೆಯೇ ಎಂದು ರವಿ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಬಿನ್ನಮತವಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು. ಅವರ ಶಾಸಕರು ಯಾರೂ ಹೊರಗೆ ಹೋಗುವುದಿಲ್ಲ. ಅವರೆಲ್ಲ ಒಟ್ಟಾಗಿ ಇರುವುದಾಗಿ ಹೇಳಿಕೊಳ್ಳುತ್ತಾರೆ. ಎಲ್ಲವೂ ಸರಿ ಇದ್ದರೆ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಏಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗಿ 7 ತಿಂಗಳಾಗಿದೆ. 7 ತಿಂಗಳಲ್ಲಿ ಪರಸ್ಪರ ಜಗಳ ಮಾಡಿಕೊಳ್ಳುವುದನ್ನು ಬಿಟ್ಟು ಅವರೇನು ಮಾಡಿದ್ದಾರೆ. ಅವರು ಮಾಡಿರುವ ಒಳ್ಳೆಯ ಕೆಲಸಗಳ ಪಟ್ಟಿ ಮಾಡಲಿ ಎಂದು ಹೇಳಿದರು.

ಪರಸ್ಪರ ಕಚ್ಚಾಡಿಕೊಂಡು ಸರ್ಕಾರವನ್ನು ಅವರೇ ಬೀಳಿಸಿಕೊಳ್ಳುತ್ತಿದ್ದರೆ ಅದನ್ನು ಉಳಿಸುವ ಕೆಲಸವನ್ನು ನಾವೇಕೆ ಮಾಡೋಣ. ನಾವೇನು ಸರ್ಕಾರಕ್ಕೆ ಬೆಂಬಲ ಕೊಟ್ಟಿಲ್ಲ. ಸರ್ಕಾರ ಬೀಳಲಿ ಎಂಬುದೇ ತಮ್ಮ ಆಸೆಯೂ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿದ್ದರೆ ಅವರ ಪಕ್ಷದವರು ಸರಿಪಡಿಸಬೇಕು. ಅದನ್ನು ಸರಿಪಡಿಸಲು ನಾವೇನು ಅವರ ಹೈಕಮಾಂಡೂ ಅಲ್ಲ, ಕೈಕಮಾಂಡೂ ಅಲ್ಲ. ನಾವು ಭಾರತೀಯ ಜನತಾ ಪಕ್ಷ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಶಾಸಕರನ್ನು ಒಟ್ಟಾಗಿ ಇಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಹೊಸದಿಲ್ಲಿಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದೆವು. ಆ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷದ ಬಿನ್ನಮತ ಹೆಚ್ಚಾಯಿತು. ಆಗಲೇ ನಮ್ಮ ಪಕ್ಷದ ಕೆಲವು ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಯತ್ನಿಸಿತು. ರಾಜಕೀಯ ಪಕ್ಷವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News