ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ: ಶಾಸಕ ರಾಜೇಗೌಡ

Update: 2019-01-15 14:13 GMT

ಚಿಕ್ಕಮಗಳೂರು, ಜ.15: ಕಾಂಗ್ರೆಸ್ ಶಾಸಕರು ಯಾರೂ ಬಿಜೆಪಿ ದಾಳಕ್ಕೆ ಸಿಲುಕಿಲ್ಲ. ಬಿಜೆಪಿಯ ಕೆಲ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಮತ್ತು ಎಷ್ಟು ಮಂದಿ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಅಗತ್ಯವಿದ್ದಾಗ ಹೇಳಲಾಗುವುದು ಎಂದು ಶಾಸಕ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯವರು ನಮ್ಮನ್ನು ಸೆಳೆಯಲು ಪ್ರಯತ್ನಿಸಿದ್ದರು. ಆದರೆ ನನಗೆ ರಾಜಕೀಯ ಸ್ಥಾನಮಾನ ನೀಡಿದ್ದೇ ಕಾಂಗ್ರೆಸ್ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನ ನೀಡುವುದಾದರೂ ನಾನು ಕಾಂಗ್ರೆಸ್ ತೊರೆಯುವುದಿಲ್ಲ ಎಂದ ಅವರು ಸದ್ಯ ಬಿಜೆಪಿಯವರು ತನ್ನನ್ನು ಸಂಪರ್ಕಿಸಿಲ್ಲ ಎಂದರು.

ರಾಜ್ಯ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಸರಕಾರ 5 ವರ್ಷ ಆಡಳಿತ ನಡೆಸಲಿದೆ. ವಿಧಾನಸಭೆಯಲ್ಲಿ ಈ ಬಾರಿ ಸುಮಾರು 84 ಜನ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು ಇದ್ದೇವೆ. ನಮಗ್ಯಾರಿಗೂ ಈಗ ಮತ್ತೆ ಚುನಾವಣೆ ನಡೆಯುವುದು ಬೇಕಿಲ್ಲ. ಬಿಜೆಪಿಯಲ್ಲಿರುವ ಮೊದಲ ಬಾರಿಗೆ ಶಾಸಕರಾಗಿರುವವರಿಗೂ ಈಗ ಚುನಾವಣೆ ನಡೆಯುವುದು ಬೇಕಿಲ್ಲ. ಈ ಬಗ್ಗೆ ಅವರು ನಮ್ಮೊಡನೆ ಚರ್ಚಿಸಿದ್ದಾರೆ. ಎಷ್ಟು ಜನ ಬಿಜೆಪಿ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳಲಾಗುವುದು ಎಂದು ತಿಳಿಸಿದರು.

ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವುದು ಕರ್ತವ್ಯ. ಯಾವುದೇ ಕಾರಣಕ್ಕೂ ಸರಕಾರವನ್ನು ಅಭದ್ರಗೊಳಿಸುವ ಯತ್ನವನ್ನು ಕಾಂಗ್ರೆಸ್ ಶಾಸಕರು ಮಾಡಲಾರರು. ಸರಕಾರವನ್ನು ಅಭದ್ರಗೊಳಿಸಿದರೆ ಮತ್ತೊಮ್ಮೆ ಚುನಾವಣೆ ಎದುರಿಸಬೇಕಾಗುತ್ತದೆ. ಈ ಕೆಲಸವನ್ನು ಯಾರೂ ಮಾಡಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News