ಸುಪ್ರೀಂಕೋರ್ಟ್‌ ಸಾಲಿಸಿಟರ್ ಜನರಲ್ ಆಗಿ ಪುತ್ತೂರಿನ ಕೆ.ಎಂ.ನಟರಾಜ್ ನೇಮಕ

Update: 2019-01-15 16:45 GMT

ಬೆಂಗಳೂರು, ಜ.15: ಕರ್ನಾಟಕದ ಹಿರಿಯ ವಕೀಲ ಕೆ.ಎಂ. ನಟರಾಜ್ ಅವರನ್ನು ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೇಂದ್ರ ಸರಕಾರ ನೇಮಕ ಮಾಡಿದೆ.

ಈ ಸಂಬಂಧ ಜ.14ರಂದು ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದ್ದು, ಅದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದೆ. ಈ ಮೂಲಕ ಸುಮಾರು 28 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆ ಕರ್ನಾಟಕದವರಿಗೆ ಸಿಕ್ಕಿದೆ. ಈ ಹಿಂದೆ ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಅವರು 1989-90ರಲ್ಲಿ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅದರ ಬಳಿಕ ಕೆ.ಎಂ. ನಟರಾಜ್ ಅವರು ಈ ಹುದ್ದೆಗೆ ನೇಮಕಗೊಂಡಿದ್ದಾರೆ.

ಪ್ರಸ್ತುತ ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಇದೀಗ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕ ಮಾಡಿದೆ. 2015ರ ಎಪ್ರಿಲ್ 8ರಂದು ನಟರಾಜ್ ಅವರು ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಕೆ.ಎಂ. ನಟರಾಜ್ ಮಂಗಳೂರಿನ ಪ್ರತಿಷ್ಠಿತ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಪದವಿ ಪಡೆದು 1992ರಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಅವರ ಬಳಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ 1995ರಲ್ಲಿ ಸ್ವತಂತ್ರವಾಗಿ ವಕೀಲಿಕೆ ಪ್ರಾರಂಭಿಸಿದರು. 2009ರಿಂದ 2013ರವರೆಗೆ ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಇವರು ಹೈಕೋರ್ಟ್‌ನ ಹಿರಿಯ ವಕೀಲರಾಗಿ ನಿಯುಕ್ತಿಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News