ಗೌರಿ ಲಂಕೇಶ್ ಹತ್ಯೆ ಪ್ರಕರಣ: 3 ಆರೋಪಿಗಳನ್ನು ಬೆಂಗಳೂರಿನಿಂದ ಮುಂಬೈಗೆ ವರ್ಗಾಯಿಸಲು ಬಾಂಬೆ ಹೈಕೋರ್ಟ್ ಆದೇಶ

Update: 2019-01-15 17:06 GMT

 ಮುಂಬೈ, ಜ. 15: ಅಫಿದಾವಿತ್ ಸಲ್ಲಿಸಲು ಹಾಗೂ ಶಸ್ತ್ರಾಸ್ತ್ರ ಸಾಗಣೆ ಆರೋಪದಲ್ಲಿ ಕಸ್ಟಡಿ ಕೋರಿ ಮಹಾರಾಷ್ಟ್ರ ಎಟಿಎಸ್ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಅನುಕೂಲವಾಗುವಂತೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಬೆಂಗಳೂರು ಜೈಲಿನಿಂದ ಮುಂಬೈ ಅರ್ಥೂರು ಜೈಲಿಗೆ ವರ್ಗಾಯಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಮೂವರು ಆರೋಪಿಗಳಾದ ಅಮೋಲ್ ಕಾಳೆ, ಅಮಿತ್ ಬಡ್ಡಿ ಹಾಗೂ ಗಣೇಶ್ ಮಿಸ್ಕಿನ್‌ರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ಎಸ್‌ಎಟಿ ದಾಖಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೃದುಲಾ ಭಟ್ಕರ್ ಈ ನಿರ್ದೇಶನ ನೀಡಿದ್ದಾರೆ.

2017ರಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಮೂವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಮುಂಬೈಯ ಹೊರವಲಯದ ನಾಲಸೊಪಾರದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ 2018 ಅಕ್ಟೋಬರ್‌ನಲ್ಲಿ ಎಟಿಎಸ್ ಈ ಮೂವರನ್ನು ಕಸ್ಟಡಿಗೆ ತೆಗೆದುಕೊಂಡಿತ್ತು.

ಅನಂತರ ಅವರನ್ನು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು 6 ದಿನಗಳ ಕಾಲ ಎಟಿಎಸ್ ಕಸ್ಟಡಿಗೆ ನೀಡಿತ್ತು. ಸೆಷನ್ಸ್ ನ್ಯಾಯಾಲಯ ಪೊಲೀಸ್ ರಿಮಾಂಡ್ ಅನ್ನು ವಿಸ್ತರಿಸಲು ನಿರಾಕರಿಸಿತ್ತು ಹಾಗೂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಲು ಈ ಹಿಂದಿನ ಆರು ದಿನಗಳ ಪೊಲೀಸ್ ಕಸ್ಟಡಿ ಎಟಿಎಸ್ ಸಾಕಾಗಿಲ್ಲ. ಮೂವರನ್ನು ಇನ್ನಷ್ಟು ದಿನಗಳು ಕಸ್ಟಡಿಗೆ ನೀಡಬೇಕು ಎಂದು ವಿಶೇಷ ಸರಕಾರಿ ಅಭಿಯೋಜಕ ರಾಜಾ ಥಕಾರೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

ಅವರ ಸಂಕ್ಷಿಪ್ತ ವಾದ ಆಲಿಸಿದ ನ್ಯಾಯಮೂರ್ತಿ ಭಟ್ಕರ್, ಬೆಂಗಳೂರಿನಲ್ಲಿರುವ ಕೇಂದ್ರ ಕಾರಾಗೃಹದ ಅಧೀಕ್ಷಕರ ಮೂಲಕ ಮೂವರು ಆರೋಪಿಗಳಿಗೆ ನೋಟಿಸು ಜಾರಿ ಮಾಡಿದೆ.

ಪ್ರತಿಕ್ರಿಯೆ ನೀಡಲು ಹಾಗೂ ತಮ್ಮನ್ನ ಸಮರ್ಥಿಸಿಕೊಳ್ಳಲು ಈ ಆರೋಪಿಗಳನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಮುಂಬೈಯ ಅರ್ಥೂರ್ ಕಾರಾಗೃಹಕ್ಕೆ ವರ್ಗಾಯಿಸಲು ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News