ಸರಕಾರ ಪತನವಾಗುವ ಯಾವ ಭೀತಿಯೂ ನಮಗಿಲ್ಲ: ಸಚಿವ ಜಾರ್ಜ್

Update: 2019-01-15 17:12 GMT

ಚಿಕ್ಕಮಗಳೂರು, ಜ.10: ಸಮ್ಮಿಶ್ರ ಸರಕಾರ ಪತನವಾಗುವ ಯಾವ ಭೀತಿಯೂ ನಮಗಿಲ್ಲ. ಕಾಂಗ್ರೆಸ್‍ನ ಯಾವ ಶಾಸಕರು ಬಿಜೆಪಿಯ ಬಾಗಿಲು ತಟ್ಟಿಲ್ಲ. ನಮ್ಮ ಶಾಸಕರು ನಮ್ಮ ಬಳಿಯೇ ಇದ್ದಾರೆ. ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದರಿಂದ ಬಿಜೆಪಿಯವರಿಗೇ ಭಯ ಶುರುವಾಗಿದೆ. ಸರಕಾರ ಬೀಳಿಸಲು ಬಿಜೆಪಿ ನಡೆಸುವ ಯಾವ ಸಂಚು ಫಲಿಸದು. ಈ ಬಗ್ಗೆ ಮಾಧ್ಯಮದವರು ಜನರಲ್ಲಿ ಗೊಂದಲವನ್ನುಂಟು ಮಾಡುವ ಕೆಲಸವನ್ನು ಕೈಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಮಂಗಳವಾರ ನಗರಕ್ಕಾಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರಕಾರ ಸುಸ್ಥಿರವಾಗಿದ್ದು, ಈ ಸಂಬಂಧ ರಾಜ್ಯದ ಜನರಲ್ಲಿ ಗೊಂದಲ ಮೂಡಲು ಮಾಧ್ಯಮದವರ ಊಹಾಪೋಗಳ ವರದಿ ಕಾರಣವಾಗಿದೆ. ಕಾಂಗ್ರೆಸ್ ಶಾಸಕರು ಎಲ್ಲಿಯೂ ಹೋಗಿಲ್ಲ. ಹೋಗುವುದೂ ಇಲ್ಲ. ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ನಮಗೆ ಯಾರ ಭಯವೂ ಇಲ್ಲ. ಬಿಜೆಪಿ ಶಾಸಕರು ಕಾಂಗ್ರೆಸ್‍ನ ಬಾಗಿಲು ತಟ್ಟುತ್ತಿರುವುದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಹಾಗಾಗಿಯೇ ಅವರ ಶಾಸಕರನ್ನು ದಿಲ್ಲಿಯ ಹೊಟೇಲ್‍ನಲ್ಲಿ ಕೂಡಿಟ್ಟುಕೊಂಡಿದ್ದಾರೆ. ಸಮ್ಮಿಶ್ರ ಸರಕಾರ ಸರಿಯಾಗಿಯೇ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾಜ್ಯಕ್ಕೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ವೇಣುಗೋಪಾಲ್ ಎಐಸಿಸಿ ಕಾರ್ಯದರ್ಶಿಗಳು, ಅವರು ರಾಜ್ಯದ ಉಸ್ತುವಾರಿಯಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಲು ಇಲ್ಲಿಗೆ ಬಂದಿದ್ದಾರೆ. ಅವರ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ. ಅವರು ಹಿಂದೆಯೂ ಬಂದಿದ್ದಾರೆ, ಇಂದೂ ಬಂದಿದ್ದಾರೆ, ಮುಂದೆಯೂ ಬರುತ್ತಿರುತ್ತಾರೆ. ಅವರ ಬಂದು ಹೋಗುವ ಕಾರಣಕ್ಕೆ ಊಹೆಗಳ ಆಧಾರದ ಮೇಲೆ ಮಾಧ್ಯಮಗಳು ವರದಿ ಮಾಡುತ್ತಿದೆ. ಅವರ ಬರುವಿಕೆಗೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.

ಸರಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧರಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಜಾರ್ಜ್, ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡಲು ಸಿದ್ಧರಿದ್ದೇವೆ. ಈ ಹಿಂದೆ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿದ್ದಾಗ ಅವರು ಕೇಳಿದ ಕೂಡಲೆ ರಾಜೀನಾಮೆ ಕೊಟ್ಟಿದ್ದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿಯೂ ರಾಜೀನಾಮೆ ಕೊಟ್ಟಿದ್ದೇನೆ ಎಂದ ಅವರು, ಪಕ್ಷ ನಮಗೆ ಅಧಿಕಾರ ನೀಡಿದೆ. ಅದನ್ನು ಕಿತ್ತು ಕೊಳ್ಳುವ ಅಧಿಕಾರ ಪಕ್ಷಕ್ಕಿದೆ. ಅದು ವೈಯಕ್ತಿಕವಾಗಿ ದೊರೆತಿದ್ದಲ್ಲ. ಈ ಸಂಬಂಧ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇವೆ. ಹೈಕಮಾಂಡ್ ಏನು ಹೇಳುವುದೋ ಆ ರೀತಿ ಮಾಡುತ್ತೇನೆಂದು ಜಾರ್ಜ್ ಸ್ಪಷ್ಟಪಡಿಸಿದರು.

ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಸಮ್ಮಿಶ್ರ ಸರಕಾರಕ್ಕೆ ತೊಂದರೆಯಾಗುವುದಿಲ್ಲ. ಈ ಹಿಂದೆ ಅವರು ಗೋವಾದಲ್ಲಿ ಏನೇನೋ ಹುನ್ನಾರ, ತಂತ್ರ ಮಾಡಿ ಅಧಿಕಾರ ಪಡೆದುಕೊಂಡರು ಎಂಬುದು ಜನತೆಗೆ ತಿಳಿದಿದೆ. ಕೇಂದ್ರದಲ್ಲಿ ಅವರದೇ ಸರಕಾರವಿದ್ದರೂ 5 ರಾಜ್ಯಗಳ ಚುನಾವಣಾ ಫಲಿತಾಂಶ ಏನಾಯಿತು. ಅವರು ಏನಾದರೂ ತಂತ್ರಗಾರಿಕೆ ಮಾಡಲಿ. ಲೋಕಸಭಾ ಚುನಾವಣೆಯ ನಂತರ ಅದ್ಯಾವುದೂ ನಡೆಯುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News