2018ನೇ ಸಾಲಿನ ಅರೆಭಾಷೆ ಅಕಾಡೆಮಿ ಪ್ರಶಸ್ತಿ ಪ್ರಕಟ: ಮೂವರಿಗೆ ಪ್ರಶಸ್ತಿಯ ಗರಿ

Update: 2019-01-15 17:22 GMT
ಕುಶಾಲಪ್ಪ ಗೌಡ, ಸುಕುಮಾರ ಗೌಡ, ತಂಗಮ್ಮ ಅಪ್ಪಚ್ಚ

ಮಡಿಕೇರಿ, ಜ.15: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಅರೆಭಾಷೆ ಸಾಹಿತ್ಯ ಕ್ಷೇತ್ರ, ಅಧ್ಯಯನ ಹಾಗೂ ಸಂಶೋಧನಾ ಕ್ಷೇತ್ರ ಮತ್ತು ಅರೆಭಾಷೆ ಸಂಸ್ಕೃತಿ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಮಂದಿಯನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಗೆ ಭಾಜನರಾದವರ ಹೆಸರು ಪ್ರಕಟಿಸಿದ ಅವರು, ಅರೆಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಕೋಡಿ ಕುಶಾಲಪ್ಪ ಗೌಡ, ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಎನ್.ಸುಕುಮಾರ ಗೌಡ ಹಾಗೂ ಅರೆಭಾಷೆ ಸಂಸ್ಕೃತಿ ಕ್ಷೇತ್ರದಲ್ಲಿ ಕಾಳೆಯಂಡ ತಂಗಮ್ಮ ಅಪ್ಪಚ್ಚ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಪುತ್ತೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನುಡಿದರು.

ಗೌರವ ಪ್ರಶಸ್ತಿಯು ತಲಾ 50ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಅಕಾಡೆಮಿಯ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಗಳು ಎದುರಾದ ಹಾಗೂ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಅಕಾಡೆಮಿಯ ಚಟುವಟಿಕೆಗಳಿಗೆ ಕೆಲವು ತಿಂಗಳು ಹಿನ್ನಡೆಯಾಗಿತ್ತು. ಆದರೆ ಇದೀಗ ಹಲವಾರು ಕಾರ್ಯಕ್ರಮಗಳು ನಿಗದಿಯಾಗಿದ್ದು, ಕೊಡಗಿನಲ್ಲೂ ಅಕಾಡೆಮಿಯ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಶ್ನೆಯೊಂದಕ್ಕೆ ಜಯರಾಮ ಗೌಡ ಅವರು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಎ.ಕೆ. ಹಿಮಕರ, ಕಡ್ಲೇರ ತುಳಸಿ ಮೋಹನ್, ಕುಂಬುಗೌಡನ ಪ್ರಸನ್ನ ಹಾಗೂ ಕಾನೆಹಿತ್ಲು ಮೊಣ್ಣಪ್ಪ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು:

ಕೋಡಿ ಕುಶಾಲಪ್ಪ ಗೌಡ: ಪ್ರಶಸ್ತಿಗೆ ಭಾಜನರಾದ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರು ಮೂಲತಃ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದವರಾಗಿದ್ದು, ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ಬಳಿಕ ಸುಳ್ಯದಲ್ಲಿ ನೆಲೆಸಿದ್ದಾರೆ.

ಕುಶಾಲಪ್ಪ ಗೌಡ ಅವರು ವಡ್ಡಾರಾಧನೆಯ ಭಾಷಿಕ ಅಧ್ಯಯನ, ಕ್ರಿ.ಶ. 1000ರಿಂದ 1400ರವರೆಗಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಕೊಡಗು ಜಿಲ್ಲೆಗಳ ಶಾಸ್ತ್ರಗಳ ಭಾಷಿಕ ಅಧ್ಯಯನ ನಡೆಸಿದ್ದಲ್ಲದೆ, ಇಂಗ್ಲೀಷ್‍ನಲ್ಲಿ 4 ಹಾಗೂ ಕನ್ನಡದಲ್ಲಿ 17 ವಿವಿಧ ಗ್ರಂಥಗಳನ್ನು, ಇಂಗ್ಲೀಷ್‍ನಲ್ಲಿ 21 ಮತ್ತು ಕನ್ನಡದಲ್ಲಿ 54 ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದು, ಇವರ 24 ಸಾಹಿತ್ಯ ವಿಮರ್ಶಾತ್ಮಕ ಪ್ರಬಂಧಗಳು ಹಾಗೂ 16 ಲಘು ಪ್ರಬಂಧಗಳು, ಹರಟೆ ಮುಂತಾದ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದರೊಂದಿಗೆ ಸಾಮಾನ್ಯ ಭಾಷಾ ವಿಜ್ಞಾನದ ಬಗ್ಗೆ ಮೂರು ಲೇಖನಗಳು ಮತ್ತು 14 ಕವಿತೆಗಳೂ ಪ್ರಕಟಗೊಂಡಿವೆ.

ಅರೆಭಾಷೆಯನ್ನು ಒಂದು ಪರಿಪೂರ್ಣ ಭಾಷೆಯಾಗಿ ಪರಿಗಣಿಸಿದ ಮೊತ್ತಮೊದಲ ವಿದ್ವಾಂಸ ಕೋಡಿ ಕುಶಾಲಪ್ಪ ಗೌಡ ಅವರಾಗಿದ್ದು, 1970ರ ದಶಕದಿಂದಲೇ ಅರೆಭಾಷೆಯನ್ನು ಒಂದು ಗಂಭೀರ ಅಧ್ಯಯನಕ್ಕೆ ಎತ್ತಿಕೊಂಡು ಅದರ ಪ್ರತಿಪಾದಕರಾಗಿ ನಿರಂತರ ದುಡಿದ ಏಕೈಕ ಸಂಶೋಧನಾ ಹೋರಾಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅರೆಭಾಷೆಯ ಮೊತ್ತಮೊದಲ ಮಹಾಕಾವ್ಯ ‘ಮಾಸನ ಮಹಾಭಾರತ’ ಇವರ ಹೆಗ್ಗಳಿಕೆಯಾಗಿದ್ದು, ಇದೀಗ ಅರೆಭಾಷೆಗೊಂದು ಲಿಪಿ, ವ್ಯಾಕರಣಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಬರೆದು ಪ್ರಕಟಿಸಿ ಮುಂದಿನ ಪೀಳಿಗೆಗೆ ಧಾರೆ ಎರೆದಿದ್ದಾರೆ. ಬಹಳ ಹಿಂದೆಯೇ ‘ಅರೆಬಾಸೆ’ಯ ವ್ಯಾಕರಣವನ್ನು ಇಂಗ್ಲೀಷ್‍ನಲ್ಲಿ ಪುಸ್ತಕ ರೂಪದಲ್ಲಿ ಬರೆದಿದ್ದು, ಅದನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಇದೀಗ ಅರಭಾಸೆಯ ವ್ಯಾಕರಣ ಗ್ರಂಥವನ್ನು ಬರೆದು ಪ್ರಕಟಣೆಗೆ ಸಿದ್ದಪಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರಕಾರದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರನ್ನು 2018ರ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ.ಸುಕುಮಾರ ಗೌಡ: ಶಿಕ್ಷಣ ಸಿದ್ಧಾಂತಿ ಎಂದೇ ಖ್ಯಾತರಾಗಿರುವ ಡಾ. ಎನ್. ಸುಕುಮಾರ ಗೌಡ ಅವರು ಮೂಲತಃ ಸುಳ್ಯ ತಾಲೂಕಿನ ಜಾಲ್ಸೂರಿನವರಾಗಿದ್ದು, ಹೈಸ್ಕೂಲ್ ಅಧ್ಯಾಪಕರಾಗಿ, ಬಳಿಕ ಶಿಕ್ಷಕರ ಶಿಕ್ಷಣ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಉನ್ನತ ವ್ಯಾಸಂಗಕ್ಕೆ ಕೆನಡಾಕ್ಕೆ ತೆರಳಿ ಅಲ್ಲಿ ಅಧ್ಯಯನ, ಅಧ್ಯಾಪನ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1986ರಲ್ಲಿ ಸ್ವದೇಶಕ್ಕೆ ಮರಳಿದ ಅವರು ಐದು ವರ್ಷಗಳ ಕಾಲ ಮಣಿಪಾಲದ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ನಿರ್ದೇಶಕರಾಗಿ, ‘ಡೆಸರ್ಟ್’ ಪದವಿಯ ಪಠ್ಯಪುಸ್ತಕಗಳ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇದೇ ಅವಧಿಯಲ್ಲಿ ಅವರು ಮಂಗಳೂರು ವಿಶ್ವವಿದ್ಯಾನಿಯಲದಲ್ಲಿ ಆಂಗ್ಲ ಭಾಷಾ ವಿಭಾಗದಲ್ಲಿ 6 ವರ್ಷಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕೆನಡಾ, ಅಮೇರಿಕಾದ ಹಲವು ಶೈಕ್ಷಣಿಕ ಪತ್ರಿಕೆಗಳಲ್ಲಿ  ಭಾಷಾ ಶಿಕ್ಷಣದ ಕುರಿತಾಗಿ ಇವರ ಅನೇಕ ಲೇಖನಗಳು ಪ್ರಕಟವಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಹಲವು ಬಾರಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಪ್ರಸಕ್ತ ಪುತ್ತೂರಿನಲ್ಲಿ ತಮ್ಮದೇ ಆದ ‘ಮಕ್ಕಳ ಮಂಟಪ’ ಎಂಬ ಸಂಸ್ಥೆಯಲ್ಲಿ ಶೈಕ್ಷಣಿಕ ಅಧ್ಯಯನ ಮತ್ತು ಗ್ರಂಥ ರಚನೆಯಲ್ಲಿ ನಿರತರಾಗಿರುವ ಇವರು ಮಂಗಳೂರು ವಿವಿಯ ಎಂಇಡಿ ವಿಭಾಗದಲ್ಲಿ ‘ಅಡ್ಜಕ್ಟ್ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಕೃತಿಗಳ ರಚನೆಕಾರರಾಗಿರುವ ಇವರು ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದು, ಈ ಬಾರಿಯ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿಗೆ ಇವರು ಆಯ್ಕೆಗೊಂಡಿದ್ದಾರೆ.

ಕಾಳೆಯಂಡ ತಂಗಮ್ಮ ಅಪ್ಪಚ್ಚ: ಇವರು ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದವರಾಗಿದ್ದು, ಅರೆಭಾಷೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಏಡಿರಾಯನ ಕತೆ, ರಾಜ-ರಾಣಿ ಕತೆ ಹಾಗೂ ಹಿಂದೆ ಹಿಂಗಿತ್ತ್ ಮತ್ತು ಗಂಧದ ಮರದ ಬಗ್ಗೆ ಬರೆದ ಅರೆಭಾಷೆ ಲೇಖನಗಳು ಅಕಾಡೆಮಿಯ ಪುಸ್ತಕದಲ್ಲಿ ಪ್ರಕಟವಾಗಿವೆ. ಮಡಿಕೇರಿ ಆಕಾಶವಾಣಿಯಲ್ಲಿ ಸೋಬಾನೆ ಹಾಡು, ಅರೆಭಾಷೆ ಭಕ್ತಿಗೀತೆಗಳನ್ನು ಹಾಡಿರುವ ಇವರು, ಹಿಂದಿನ ಕಾಲದಲ್ಲಿ ಹಿರಿಯರ ಜೀವನ ಪದ್ಧತಿ, ಕೊಡಗಿನ ಕಾವೇರಿ ಸಂಕ್ರಾಂತಿ, ಹುತ್ತರಿ ಹಬ್ಬ, ಕೈಲ್ ಮುಹೂರ್ತ ಹಬ್ಬದ ಬಗ್ಗೆ ಬಾಣಂತಿ ಮದ್ದು ಬಗ್ಗೆಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮದುವೆಗೆ ಸಂಬಂಧಿಸಿದ ಎಲ್ಲಾ ಸೋಬಾನೆ ಪದ ಹೇಳುವುದರಲ್ಲಿ ಹೆಣ್ಣು-ಗಂಡು ವಹಿಸುವುದರಲ್ಲಿ ಮಾರ್ಗದರ್ಶನ ನೀಡುತ್ತಿರುವ ಇವರು ಅರೆಭಾಷೆ ಸಂಸ್ಕತಿ ಆಚಾರ-ವಿಚಾರಗಳನ್ನು ಈಗಿನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಮಾದರಿಯಾಗಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News