ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ದಿಢೀರ್ ಹಿಂದಿರುಗಿದ ಸಚಿವ ಜಾರ್ಜ್

Update: 2019-01-15 17:32 GMT

ಚಿಕ್ಕಮಗಳೂರು, ಜ.15: ರಾಜ್ಯದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ಮಂಗಳವಾರ ನಗಕ್ಕಾಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಮ್ಮ ನಿಗದಿತ ಮೂರು ದಿನಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಸ್ಸಾದ ಘಟನೆ ನಡೆಯಿತು.

ಸಚಿವರ ನಿಗದಿತ ಕಾರ್ಯಕ್ರಮದಂತೆ ಅವರು ಜಿಲ್ಲೆಯಲ್ಲಿ ಜ.18 ರವರೆಗೆ ಇರಬೇಕಿತ್ತು. ಆದರೆ ನಗರಕ್ಕೆ ಆಗಮಿಸಿದ ಸಚಿವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನಂತರ ಸಚಿವರು ಉಳಿದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಸ್ಸಾದರು.
ವಾಪಸ್ಸಾಗುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ಪೂರ್ವ ಸಿದ್ದತಾ ಸಭೆಯನ್ನು ಕರೆದಿದ್ದಾರೆ. ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೆಂಗಳೂರಿಗೆ ವಾಪಸ್ಸಾಗುತ್ತಿರುವುದಾಗಿ ಹೇಳಿದರು.

ಉಳಿದ ಪೂರ್ವ ನಿಗದಿತ ಕಾರ್ಯಕ್ರಮಗಳ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಬೆಂಗಳೂರಿಗೆ ತೆರಳಿದ ನಂತರ ಆ ಬಗ್ಗೆ ತಿಳಿಸುವುದಾಗಿ ಹೇಳಿ, ವೇಣುಗೋಪಾಲ್ ಅವರು ಕರೆದಿರುವ ಸಭೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ ಎಂದರು.
ಕಂಪ್ಲಿ ಶಾಸಕ ಗಣೇಶ್ ಅವರು ಚಿಕ್ಕಮಗಳೂರಿಗೆ ಬಂದು ತಮ್ಮ ಎಸ್ಟೇಟ್‍ನಲ್ಲಿಯೇ ಇರುವ ಬಗ್ಗೆ ಕೇಳಿ ಬರುತ್ತಿದೆ ಎಂದಾಗ, ಆ ಬಗ್ಗೆ ತಮಗೆ ಏನೂ ತಿಳಿದಿಲ್ಲ. ಗಣೇಶ್ ತಮ್ಮ ಎಸ್ಟೇಟಿಗಂತೂ ಬಂದಿಲ್ಲ. ಅವರು ಬಂದರೆ ಸ್ವಾಗತಿಸುವುದಾಗಿ ತಿಳಿಸಿದ ಅವರು, ಯಾವುದೇ ಶಾಸಕರು ಜಿಲ್ಲೆಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News