ಎಸಿ/ಎಸ್ಪಿ ದೌರ್ಜನ್ಯ ಕಾಯ್ದೆಯಡಿ 63 ಪ್ರಕರಣಗಳು ದಾಖಲು: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2019-01-15 17:55 GMT

ಚಿಕ್ಕಮಗಳೂರು, ಜ.15: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಅಕ್ಟೋಬರ್ 2018ರಿಂದ ಡಿ.2018ರವರೆಗೆ 63 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ 63 ಪ್ರಕರಣಗಳಲ್ಲಿ 19 ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. ಒಟ್ಟು 23 ಸಂತ್ರಸ್ಥರು ಪರಿಹಾರ ಧನ ಸಹಾಯ ಪಡೆದಿದ್ದಾರೆ. 12 ಪ್ರಕರಣಗಳಿಗೆ ಪರಿಹಾರ ಧನ ವಿತರಿಸಲು ಕ್ರಮ ವಹಿಸಲಾಗಿದೆ. 6 ಪ್ರಕರಣಗಳು ಪರಿಹಾರಧನ ಮಂಜೂರಾತಿಗೆ ಬಾಕಿ ಉಳಿದಿದ್ದು, 26 ಪ್ರಕರಣಗಳು ಪೊಲೀಸ್ ಇಲಾಖೆಯಿಂದ ದೋಷಾರೋಪಣ ಪಟ್ಟಿ ಬರಲು ಬಾಕಿ ಇವೆ ಎಂದು ಹೇಳಿದರು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನವಿಗಳನ್ನು ಸಲ್ಲಿಸಿದಾಗ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ಸೂಚಿಸಿದರು. ಬಹುತೇಕ ಗ್ರಾಮಗಳಲ್ಲಿ  ಸ್ಮಶಾನಕ್ಕೆ ಭೂಮಿ ನೀಡುವಂತೆ ಅರ್ಜಿಗಳು ಬರುತ್ತಿವೆ. ಕಂದಾಯ ಭೂಮಿ ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಿ ಸ್ಮಶಾನಕ್ಕೆ ಭೂಮಿ ನೀಡುವಂತೆ ತಹಶೀಲ್ದಾರರಿಗೆ ತಿಳಿಸಿದರು.

ಸಮಿತಿಯ ಸದಸ್ಯರಾದ ರೇಣಾಕರಾಧ್ಯ ಮಾತನಾಡಿ, ದಲಿತರಿಗೆ ಫಾರಂ ನಂಬರ್ 53, 53 (ಎ) ಮತ್ತು 94 (ಸಿ) ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಕೊಡಬೇಕೆಂದು ಸರಕಾರ ನಿರ್ಣಯ ಮಾಡಿದೆ. ಆದರೆ ಅಧಿಕಾರಿಗಳು ನೀಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು, ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಕುರಿತು ಭೂಮಿ ಮಂಜೂರು ಮಾಡಿಕೊಡುವಂತೆ ಚಿಕ್ಕಮಗಳೂರಿನ ಉಪವಿಭಾಗಾಧಿಕಾರಿಗಳಿಗೆ ತಿಳಿಸಲಾಗಿದೆ. ವಸತಿ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಕಂದಾಯ ಮಂಜೂರು ಭೂಮಿ ಮಾಡಿಕೊಡುವ ಕುರಿತು ಶೃಂಗೇರಿ ತಹಶೀಲ್ದಾರರು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ವಹಿಸಲಾಗುವುದು ಎಂದರು.

ಕಡೂರು ತಾಲೂಕಿನ ಗ್ರಾಮ ಪಂಚಾಯತ್‍ಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ಲಕ್ಷದವರೆಗಿನ ಕಾಮಗಾರಿಯನ್ನು ನೀಡುತ್ತಿಲ್ಲ. ಸರಕಾರದ ಆದೇಶವನ್ನು ಕಡೆಗಣಿಸಲಾಗಿದೆ ಎಂದು ಸದಸ್ಯರು ದೂರಿದರು. ಈ ವೇಳೆ ಕಡೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನೀರು, ವಿದ್ಯುತ್, ರಸ್ತೆ ಸೇರಿದಂತೆ  ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯತ್ ಗಳಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳನ್ನು ಸಮಿತಿಯ ಮುಂದೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್‍ ಪಾಂಡೆ, ಜಿ.ಪಂ ಉಪಕಾರ್ಯದರ್ಶಿ ರಾಜಗೋಪಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News