ವೈಚಾರಿಕತೆಯ ಆಧುನಿಕ ಕರ್ನಾಟಕ ನಿರ್ಮಾಣ ಆಗಬೇಕು: ನಟರಾಜ್ ಹುಳಿಯಾರ್

Update: 2019-01-15 18:20 GMT

ಕೊಪ್ಪ,ಜ.15: ಜನರ ಸಮಯ ವ್ಯರ್ಥ ಮಾಡುವ ಡಿಜಿಟಲ್ ಮಾದ್ಯಮಕ್ಕೆ ತಡೆ ಹಾಕಬೇಕು. ಜನರ ಸಮಯ, ಹಣ ತಿನ್ನುವುದು ಅವರ ಉದ್ದೇಶ. ಅದರ ಮೂಲಕ ನಮ್ಮ ಯುವ ಜನಾಂಗದ ಕಣ್ಣು ಬುದ್ದಿಗೆ ಆಗುವ ಹಾನಿಯನ್ನು ಪೋಷಕರು ತಡೆಯಬೇಕು ಎಂದು ಸಾಹಿತಿ ನಟರಾಜ್ ಹುಳಿಯಾರ್ ಕರೆ ನೀಡಿದರು.

ತಾಲೂಕಿನ ಕಮ್ಮರಡಿಯಲ್ಲಿ ನಡೆದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಮಾದ್ಯಮಗಳ ವಿಮರ್ಶೆ ಕೇಳಿ ತೀರ್ಮಾನ ತೆಗೆದುಕೊಳ್ಳುವ ಬದಲು ಕುವೆಂಪು, ತೇಜಸ್ವಿಯವರ ವಿವೇಕ ಬಳಸಿ, ವೈಚಾರಿಕ, ದಲಿತ ಮತ್ತು ಸ್ತ್ರೀಸಮಾನತೆಯ ಆಧುನಿಕ ಕರ್ನಾಟಕ ನಿರ್ಮಾಣ ಆಗಬೇಕು. ಪುಸ್ತಕ ಸಂಸ್ಕ್ರತಿಯಿಂದ ಬೆಳೆಯಬೇಕು. ಕನ್ನಡ ಪುಸ್ತಕಗಳನ್ನು ಓದುವುದರಿಂದ ಮಕ್ಕಳು ದಾರಿ ತಪ್ಪುವ ಪ್ರಮೇಯ ಬರಲ್ಲ. ಎಲ್ಲಾ ಭಾಷೆಯ ಸಾಹಿತ್ಯಗಳು ಕನ್ನಡದಲ್ಲಿ ಬಂದಿವೆ. ಪ್ರತಿ ಮನೆಯಲ್ಲೂ ಗುಣಮಟ್ಟದ ಕನಿಷ್ಟ 100 ಪುಸ್ತಕಗಳು ಇರಬೇಕು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಮಕ್ಕಳನ್ನು ಯಾವುದೇ ಹಿಂಸೆಗೆ ಕಳುಹಿಸಬೇಡಿ, ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸ್ವಾಗತ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ದಾನಿಗಳು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು, ಗ್ರಾಮಸ್ಥರು ಎಲ್ಲರನ್ನು ಸ್ಮರಿಸುತ್ತೇನೆ. ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಕಡಿಮೆಯಿಲ್ಲದಂತೆ ಈ ಸಮ್ಮೇಳನ ನಡೆದಿದ್ದು ಒಂದು ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ. ಐದು ಗೋಷ್ಠಿಗಳಲ್ಲಿ ಸಮಾಕಾಲೀನ ಸಮಸ್ಯೆಗಳ ಕುರಿತು ಉತ್ತಮ ಚರ್ಚೆಯಾಗಿದೆ. ಕಮ್ಮರಡಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಜ್ಞಾಪಕಾರ್ಥವಾಗಿ ಇಲ್ಲಿಗೆ ಒಂದು ಶಾಶ್ವತ ಕಾಮಗಾರಿ ಮಾಡಿಕೊಡಲು ಬದ್ದನಾಗಿದ್ದೇನೆ. ಗ್ರಾಮಸ್ಥರ ಅಭಿಪ್ರಾಯ ಪಡೆದು ಕಾಮಗಾರಿಯನ್ನು ನಿರ್ಧರಿಸಲಾಗುವುದು ಎಂದರು. 

ಮಾಜಿ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಎಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು. ಆಂಗ್ಲ ಮಾದ್ಯಮ ಶಾಲೆ ಬೇಡ ಎಂಬ ಕೂಗು ಕೇಳಿಬರುತ್ತದೆ, ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ, ವಿಧಾನ ಸಭೆಯಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತವೆ. ಆದರೆ ಈವರೆಗೂ ಅದನ್ನು ಜಾರಿ ಮಾಡಲು ಸಾದ್ಯವಾಗಿಲ್ಲ. ರಾಜಕಾರಣಿಗಳ ಮಾಲಕತ್ವದಲ್ಲೇ ಆಂಗ್ಲ ಮಾದ್ಯಮ ಶಾಲೆಗಳಿರುವಾಗ ಇದು ಕಷ್ಟ ಸಾಧ್ಯವಾದ ವಿಚಾರವೂ ಹೌದು. ಇದನ್ನೆಲ್ಲಾ ಗಮನಿಸಿಯೇ ಮುಖ್ಯಮಂತ್ರಿಗಳು 1000 ಆಂಗ್ಲ ಮಾದ್ಯಮ ಶಾಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಇದಕ್ಕೆ ನನ್ನ ಸಹಮತ ಇದೆ. ಗ್ರಾಮೀಣ ಭಾಗದ ಮಕ್ಕಳು ಬುದ್ದಿಮತ್ತೆಯಲ್ಲಿ ಮುಂದೆ ಇದ್ದರೂ ಭಾಷಾ ಸಮಸ್ಯೆಯಿಂದ ನಗರಪ್ರದೇಶಗಳ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಆಗುವುದಿಲ್ಲ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಮಾದ್ಯಮದಲ್ಲಿ ಕಲಿಯುವುದು ತಪ್ಪಲ್ಲ. ಒಂದೋ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಏಕರೂಪ ಶಿಕ್ಷಣ ಪದ್ದತಿ ಜಾರಿಯಾಗಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಬೇಕು ಎಂದರು. ಕನ್ನಡ ನಮ್ಮ ಹೃದಯದ ಭಾಷೆ, ನಮ್ಮ ರಾಜ್ಯದಲ್ಲೇ ಕನ್ನಡಿಗರು ಉದ್ಯೋಗಕ್ಕಾಗಿ ಮೀಸಲಾತಿ ಕೇಳುವ ಪರಿಸ್ಥಿತಿ ಬಂದಿದ್ದು ದುರಂತ ಎಂದರು.

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಕೂಗಿನ ಜೊತೆಗೆ ಜಾರಿಯಾಗಬೇಕೆಂದು ಹೇಳೋರು ಅದನ್ನು ಬೆಂಬಲಿಸುವವರು ಇದ್ದಾರೆ. ಮಲೆನಾಡಿನಲ್ಲಿ ಕಾಡನ್ನು ಅತ್ಯಂತ ಪ್ರೀತಿಯಿಂದ ರಕ್ಷಣೆ ಮಾಡಿದ್ದೇವೆ. ಅರಣ್ಯ ಇಲಾಖೆಯವರು ಟ್ರಂಚ್ ನಿರ್ಮಿಸಿ ಅಕೇಶಿಯಾ ಗಿಡಗಳನ್ನು ಬೆಳೆಯಲು ಪ್ರಾರಂಭಿಸಿದ ಮೇಲೆ ಜನರಲ್ಲಿ ನಮ್ಮದು ಎಂಬ ಭಾವನೆ ಹೋಗಿ ಸಮಸ್ಯೆ ಸೃಷ್ಠಿಯಾಗಿದೆ. ಕೇರಳ ಮತ್ತು ಮಡಿಕೇರಿಯಲ್ಲಿ ನಡೆದ ಪ್ರಕೃತಿ ವಿಕೋಪವನ್ನು ವೈಭವೀಕರಿಸಿದ್ದು ಅರಣ್ಯ ಇಲಾಖೆಯವರಿಗೆ ಬಲ ಕೊಟ್ಟಿದೆ. ಬಯಲು ಸೀಮೆಯಲ್ಲಿ ಕಾಡು ಬೆಳೆಸಲು ಅವಕಾಶವಿದ್ದರೂ ಅರಣ್ಯ ಇಲಾಖೆಯವರು ಮಲೆನಾಡಲ್ಲೇ ಗಿಡ ನೆಡುತ್ತಾರೆ ಎಂದು ದೂರಿದರು. 

ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ ಮಾತನಾಡಿ, ನಾವೇ ರೂಪಿಸಿದ ಕಾನೂನನ್ನು ಮೀರಿ ಆಂಗ್ಲ ಮಾದ್ಯಮ ಶಾಲೆಗಳಿಗೆ ಅನುಮತಿ ನಮಗೆ ಮುಳುವಾಗಿದೆ. ಆಂಗ್ಲ ಮಾದ್ಯಮ ಶಾಲೆಗಳು ಸರ್ಕಾರಿ ಪ್ರಾಥಮಿಕ ಶಾಲೆಗಳಿಗಿಂತ ಕನಿಷ್ಠ 1 ಕಿ.ಮೀ. ಅಂತರ, ಮಾದ್ಯಮಿಕ ಶಾಲೆಗಳಿಗಿಂತ 3 ಕಿ.ಮೀ. ಅಂತರ, ಪ್ರೌಢಶಾಲೆಗಳಿಗಿಂತ 5 ಕಿ.ಮೀ ಅಂತರದಲ್ಲಿರಬೇಕೆಂದು ನಿಯಮವಿದೆ. ಆದರೆ ಸರ್ಕಾರಿ ಶಾಲೆಯ ಕಾಂಪೌಂಡ್ ಪಕ್ಕದಲ್ಲೇ ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಹಿಂದಿನ ಡಿಡಿಪಿಐ 15 ದಿನದಲ್ಲಿ 30 ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದಾಗ ಇದನ್ನು ವಿರೋಧಿಸಿ ಜಿ.ಪಂ.ನಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಡಿಡಿಪಿಐಯನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ಆ ವ್ಯಕ್ತಿಯನ್ನು ಮತ್ತೊಂದು ದೊಡ್ಡ ಜಿಲ್ಲೆಗೆ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು ಎಂದು ಖೇದ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಶಂ.ನ. ಶೇಷಗಿರಿ ಮಾತನಾಡಿ, ಭಾಷೆ, ಜಾತಿ, ಧರ್ಮ, ಪಕ್ಷದ ಎಲ್ಲೆ ಮೀರಿ ಎಲ್ಲಾ ವರ್ಗದ ಜನ ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಟ್ಟಿದ್ದೀರಿ, ಅತ್ಯುತ್ತುಮ ಗೋಷ್ಠಿಗಳು ನಡೆದಿವೆ. ಎರಡು ದಿನಗಳ ಕಾಲ ನಡೆದ ಸಾಹಿತ್ಯ ಜಾತ್ರೆಯಲ್ಲಿ ಎಲ್ಲವೂ ಅಚ್ಟುಕಟ್ಟಾಗಿ, ಶಿಸ್ತುಬದ್ದವಾಗಿ ನಡೆದಿದ್ದು ನನ್ನ ಹೃದಯ ತುಂಬಿ ಬಂದಿದೆ ಎಂದರು.

ಸಭೆಯಲ್ಲಿ ಸಮ್ಮೇಳನಾಧ್ಯಕ್ಷ ಶಂ.ನ. ಶೇಷಗಿರಿ ದಂಪತಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಟಿ.ಡಿ. ರಾಜೇಗೌಡ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ವಿವಿಧ ಸಮಿತಿಗಳ ಅಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಸ್ಥಳೀಯ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News